ಹೊಸದಿಗಂತ ಧಾರವಾಡ :
ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗೆ ಜನಿವಾರ ತೆಗೆಸಿದ ಕೃತ್ಯ ಬೀದರ್, ಶಿವಮೊಗ್ಗ, ಸಾಗರದ ನಂತರದಲ್ಲಿ ಈಗ ಧಾರವಾಡದಲ್ಲೂ ನಡೆದಿದ್ದು ತಡವಾಗಿ ಪತ್ತೆಯಾಗಿದ್ದು ಬ್ರಾಹ್ಮಣ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ.
ನಗರದ ಹುರಕಡ್ಲಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಆಗಮಿಸಿದ್ದ ರಾಘವೇಂದ್ರ ನಗರದ ನಂದನ್ ಏರಿ ಎಂಬ ವಿದ್ಯಾರ್ಥಿಯನ್ನು ಕೇಂದ್ರದ ಹೊರಗಡೆ ಭದ್ರತಾ ಸಿಬ್ಬಂದಿ ಪರೀಕ್ಷಿಸುವಾಗ ನಂದನ್ ಧರಿಸಿದ್ದ ಜನಿವಾರ ಕಣ್ಣಿಗೆ ಬಿದ್ದಿದ್ದು ಕೂಡಲೇ ಅದನ್ನೆಗೆಯುವಂತೆ ಹೇಳಿದ್ದಾರೆ.
ವಿದ್ಯಾರ್ಥಿ ಒಪ್ಪದಿದ್ದಾಗ ಕತ್ತರಿ ತಂದು ಜನಿವಾರ ಕತ್ತರಿಸಿ ವಿದ್ಯಾರ್ಥಿಯ ಕೈಗೆ ಕೊಟ್ಟಿದ್ದಾರೆ. ಆಗ ಆಘಾತಕ್ಕೆ ಒಳಗಾದ ನಂದನ್ ಮಾತನಾಡಲಾಗದೇ ಪರೀಕ್ಷಾ ಕೇಂದ್ರದೊಳಗೆ ಹೋಗಿ ಪರೀಕ್ಷೆ ಬರೆದಿದ್ದಾನೆ. ವಿಚಾರವನ್ನು ಯಾರ ಬಳಿಯೂ ಹೇಳಿಕೊಂಡಿಲ್ಲ. ಎರಡನೇ ದಿನವೂ ಜನಿವಾರವಿಲ್ಲದೇ ಹೋಗಿ ಪರೀಕ್ಷೆ ಬರೆದು ಬಂದಿದ್ದಾನೆ.ಆದರೆ ಯಾವಾಗ ರಾಜ್ಯದ ಹಲವು ಕಡೆಗಳಲ್ಲಿ ಇಂಥ ಪ್ರಕರಣಗಳು ಮಾಧ್ಯಮಗಳಲ್ಲಿ ಬಹಿರಂಗಗೊಂಡವೋ ಆಗ ಈ ವಿಚಾರವನ್ನು ಅಣ್ಣನಿಗೆ ಹಾಗೂ ತಂದೆಯ ಮುಂದೆ ಪ್ರಸ್ತಾಪಿಸಿದ್ದಾನೆ. ಈ ಘಟನೆಯಿಂದ ಸಿಟ್ಟಾಗಿರುವ ಕುಟುಂಬಸ್ಥರು, ಈ ಬಗ್ಗೆ ಸರಿಯಾದ ತನಿಖೆಯಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. ಬ್ರಾಹ್ಮಣ ಸಮುದಾಯದವರು ಸೋಮವಾರ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.