ಹೊಸದಿಗಂತ ಹಾವೇರಿ:
ಹಿಂದುಳಿದ ವರ್ಗಗಳ ನಾಯಕ, ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಅ.3ರಂದು ಹುಬ್ಬಳ್ಳಿಯಿಂದ ಬೆಂಗಳೂರಿನ ವರೆಗೆ ಅಹಿಂದ ಒಕ್ಕೂಟದಿಂದ ಜನ ಜಾಗೃತಿ ಹಮ್ಮಿಕೊಳ್ಳಲಾಗಿದೆ ಎಂದು ಅಹಿಂದ ಒಕ್ಕೂಟದ ರಾಜ್ಯಾಧ್ಯಕ್ಷ ಮುತ್ತಣ್ಣ ಶಿವಳ್ಳಿ ಹೇಳಿದರು.
ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶೋಷಿತ ಸಮುದಾಯಗಳ ಮುಖಂಡ ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಅನಗತ್ಯ ಆರೋಪಗಳನ್ನು ಹೊರಿಸಿ ಅವರು ಅಧಿಕಾರ ನಡೆಸಲು ತೊಂದರೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರಾಷ್ಟ್ರಪತಿಗಳ ಪ್ರತಿನಿಧಿಗಳು ಎಂದೇ ಗೌರವ ಹೊಂದಿರುವ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೇಪಿಯೇತರ ಸರ್ಕಾರಗಳು ಇರುವಲ್ಲಿ ರಾಜ್ಯಪಾಲರ ಮೂಲಕ ತೊಂದರೆ ನೀಡಿ ಅಲ್ಲಿನ ಸರ್ಕಾರಗಳನ್ನು ಅಸ್ಥಿರಗೊಳಿಸಿ ಬಿಜೆಪಿ ಸರ್ಕಾರ ತರಲು ಹುನ್ನಾರ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಹಿಂದ ನಾಯಕರ ಉಳಿವಿಗಾಗಿ, ಸಂವಿಧಾನದ ಪೀಠಿಕೆ ಇರಿಸಿಕೊಂಡು ಕ್ಯಾಂಟರ್ ವಾಹನದ ಮೂಲಕ ಜಾಗೃತಿ ಜಾಥಾ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಅಹಿಂದ ಒಕ್ಕೂಟದ ಕಾರ್ಯಾಧ್ಯಕ್ಷ ಗುರನಗೌಡ ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಬಿಜೆಪಿ ನಾಯಕರು ಹುನ್ನಾರ ನಡೆಸಿ ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸುವ ಹುನ್ನಾರ ನಡೆಸಿದ್ದಾರೆ. ಸಿದ್ದರಾಮಯ್ಯ ಬೆಂಬಲಿಸಿ ಅ.3ರಂದು ಬೆಳಗ್ಗೆ ೧೧.೩೦ಕ್ಕೆ ಹುಬ್ಬಳ್ಳಿ ಯಿಂದ ಜಾಥಾ ಆರಂಭಗೊಳ್ಳಲಿದೆ. ಮಾರ್ಗ ಮಧ್ಯ ಶಿಗ್ಗಾಂವಿ, ದಾವಣಗೆರೆಯಲ್ಲಿ ಅಂಬೇಡ್ಕರ್, ರಾಣಿ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಚಿತ್ರದುರ್ಗದಲ್ಲಿ ವಾಸ್ತವ್ಯ ಮಾಡಲಾಗುವುದು. ಅ.೪ರಂದು ಬೆಳಗ್ಗೆ ಮತ್ತೆ ಜಾಥಾ ಆರಂಭಗೊಂಡು ತುಮಕೂರಿನ ಸಿದ್ದಾರ್ಥ ಕಾಲೇಜಿನಲ್ಲಿ ಸಮಾವೇಶ, ಅಲ್ಲಿಂದ ಬೆಂಗಳೂರಿನ ವಿಧಾನಸೌಧ ತಲುಪುತ್ತದೆ. ಅಲ್ಲಿ ಸಿದ್ದರಾಮಯ್ಯ ಅವರಿಗೆ ಮಧ್ಯಾಹ್ನ ೪ಕ್ಕೆ ಬೆಂಬಲ ವ್ಯಕ್ತಪಡಿಸಿ, ಸಂಜೆ ೬ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ಬಹಿರಂಗ ಸಮಾವೇಶ ನಡೆಸಲಾಗುವುದು. ಈ ಜಾಥಾದಲ್ಲಿ ನೂರಾರು ನಾಯಕರು ಸ್ವಯಂಪ್ರೇರಿತ ಬೆಂಬಲ ನೀಡಿದ್ದು ಸಾವಿರಾರು ಜಾನರು ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಅಹಿಂದ ಒಕ್ಕೂಟದ ನಾಯಕರಾದ ಹನುಮಂತ ಬಂಡಿವಡ್ಡರ, ಮಹದೇವಗೌಡ, ಶ್ರೀಧರ ದೊಡ್ಡಮನಿ ಮತ್ತಿತರರು ಇದ್ದರು.