ಜಾಂಟಿ ಸೊರಿಪ್ಟೊ ಗಾಜಾ ಪಟ್ಟಿ ಸಂಘರ್ಷ ವಾಗ್ಝರಿಗೆ ‘ನಡುಗಿತು’ ವಿಶ್ವ ಸಂಸ್ಥೆಯ ಭದ್ರತಾ ಕೌನ್ಸಿಲ್ ಸಭೆ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ನ್ಯೂಜರ್ಸಿಯ ವೈಟ್‌ಹೌಸ್ ಸ್ಟೇಷನ್‌ನಿಂದ ಉತ್ತರಕ್ಕೆ ಏಳು ಕಿ.ಮೀ. ದೂರದಲ್ಲಿ ಕಳೆದ ರಾತ್ರಿ (ಭಾರತೀಯ ಕಾಲಮಾನ) ಸಂಭವಿಸಿದ ಭೂಕಂಪ ವಿಶ್ವ ಸಂಸ್ಥೆಯ ಭದ್ರತಾ ಕೌನ್ಸಿಲ್ ಸಭೆಯನ್ನೇ ‘ನಡುಗಿಸಿ’ತ್ತು ಎಂಬ ಅಂಶವನ್ನು ಮಾಧ್ಯಮಗಳು ವರದಿ ಮಾಡಿವೆ!

ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ಗಾಜಾ ಪಟ್ಟಿ ಸಂಘರ್ಷ ಕುರಿತ ಚರ್ಚೆಗೆ ವಿಶ್ವಸಂಸ್ಥೆಯ ಪ್ರತಿನಿಧಿಗಳು ಭದ್ರತಾ ಸಮಿತಿ ಆವರಣದಲ್ಲಿ ಸೇರಿ ಸಭೆ ನಡೆಸುತ್ತಿದ್ದರು. ಸಭೆಯಲ್ಲಿ ಗಾಜಾ ಪಟ್ಟಿಯಲ್ಲಿನ ಮಹಿಳೆಯರು ಹಾಗೂ ಮಕ್ಕಳು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಅಮೆರಿಕದ ಸೇವ್ ದಿ ಚಿಲ್ಡ್ರನ್ ಸಂಸ್ಥೆಯ ಅಧ್ಯಕ್ಷೆ ಹಾಗೂ ಸಿಇಒ ಜಾಂಟಿ ಸೊರಿಪ್ಟೊ ವಿವರಿಸುತ್ತಿರುವ ವೇಳೆಯೇ ಭೂಕಂಪನ ಸಂಭವಿಸಿದೆ.

ಏನಾಗುತ್ತಿದೆ ಎಂಬುದು ಕ್ಷಣಕಾಲ ಅರಿವಿಗೆ ಬರದೆ ಅಲ್ಲಿದ್ದ ಎಲ್ಲರೂ ಪರಸ್ಪರ ಮುಖ ನೋಡಿಕೊಂಡಿದ್ದಾರೆ. ಈ ವೇಳೆ, ಇದು ಭೂಕಂಪದ ಅನುಭವವೇ? ಎಂದು ಜಾಂಟಿ ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವ ಸಂಸ್ಥೆಯ ಪ್ಯಾಲೆಸ್ಟೀನ್ ಪ್ರತಿನಿಧಿ ರಿಯಾದ್ ಮನ್ಸೂರ್, ಹೌದು. ನಿಮ್ಮ ಮಾತುಗಳಿಂದ ನೀವು ನೆಲವನ್ನೇ ನಡುಗುವಂತೆ ಮಾಡಿಬಿಟ್ಟಿರಿ ಎಂದು ಆತಂಕದ ಕ್ಷಣಗಳಲ್ಲಿಯೂ ನಗೆ ಚಟಾಕಿ ಹಾರಿದ್ದಾರೆ!

ಬೆಳಿಗ್ಗೆ 10.30ಕ್ಕೆ ಸಂಭವಿಸಿದ ಈ ಘಟನೆಯಿಂದ ಯಾವುದೇ ಅಪಾಯ ಉಂಟಾಗಿಲ್ಲ. ಹೆಚ್ಚಿನ ಮಾಹಿತಿಯನ್ನು ನ್ಯೂಯಾರ್ಕ್ ಜನರಿಗೆ ನಿರಂತರವಾಗಿ ನೀಡಲಾಗುವುದು ಎಂದು ಗವರ್ನರ್ ಕ್ಯಾಥಿ ಹೊಚುಲ್ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!