ಹೊಸದಿಗಂತ ವರದಿ,ಮಂಡ್ಯ :
ಅಂತಾರಾಜ್ಯ ನದಿ ವಿವಾದ ಪರಿಹಾರಕ್ಕೆ ರಾಷ್ಟ್ರೀಯ ಜಲನೀತಿಯೊಂದೇ ಉಪಾಯವಾಗಿದ್ದು, ಈ ಹಿನ್ನೆಲೆಯಲ್ಲಿ ತಕ್ಷಣ ರಾಷ್ಟ್ರೀಯ ಜಲನೀತಿ ಜಾರಿಗೊಳಿಸುವುದರೊಂದಿಗೆ ಕಾವೇರಿ ಸಂಕಷ್ಟ ಸೂತ್ರ ರೂಪಿಸಬೇಕು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.
ನಗರದ ಸರ್ ಎಂ.ವಿ. ಪ್ರತಿಮೆ ಬಳಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ನಿರಂತರ ಧರಣಿಯಲ್ಲಿ ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿ ಜಲ ಸಂಘರ್ಷ ಪರಿಹಾರಕ್ಕೆ ಮುಂದಾಗಬೇಕು, ಕಾವೇರಿ ಸಂಕಷ್ಟದ ಸನ್ನಿವೇಶದಲ್ಲಿ ಪಾಲಿಸಬೇಕಾದ ಸಂಕಷ್ಟ ಸೂತ್ರ ರಚಿಸಬೇಕು ಆ ನಿಟ್ಟಿನಲ್ಲಿ ದೇಶದ ಜಲವಿವಾದಗಳಿಗೆ ಪರಿಹಾರ ರೂಪಿಸಲು ರಾಷ್ಟ್ರೀಯ ಜಲ ನೀತಿ ರೂಪಿಸಬೇಕು ಎಂದು ಆಗ್ರಹಿಸಿದರು.
ಕಾವೇರಿ ವಿಚಾರದಲ್ಲಿ ಇದೂವರೆಗೆ ಯಾವುದೇ ದೃಢತೆ ಇಲ್ಲದ ಸ್ವಷ್ಟ ನಿಲುವು ತಾಳಲು ರಾಜ್ಯ ಸರ್ಕಾರ ವಿಫಲವಾಗಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನ ವಹಿಸಿ ನಿರ್ಲಕ್ಷತೆ ತೋರಿದ್ದಾರೆ,ನ.1ರೊಳಗೆ ವಿಧಾನಮಂಡಲದ ಜಂಟಿ ಅಧಿವೇಶನ ಕರೆದು ನೀರು ಬಿಡುವುದಿಲ್ಲ ಎಂಬ ಒಂದು ಸಾಲಿನ ನಿರ್ಣಯವನ್ನು ಕೈಗೊಂಡು ಸುಗ್ರೀವಾಜ್ಞೆ ಹೊರಡಿಸಬೇಕು, ಬಿಕ್ಕಟ್ಟು ಸೃಷ್ಟಿಯಾದರೆ ಅದೇ ಕಾನೂನಾಗಿ ಪರಿವರ್ತನೆಗೊಳ್ಳಲಿದೆ ಹಾಗಾಗಿ ದೃಢ ಹೆಜ್ಜೆ ಇಡಬೇಕೆಂದು ಒತ್ತಾಯಿಸಿದರು.
ದಕ್ಷಿಣದ ಕಾವೇರಿ, ಉತ್ತರದ ಕೃಷ್ಣ ಕನ್ನಡಿಗರಿಗೆ ಎರಡು ಕಣ್ಣು ಇದ್ದಂತೆ, ಬೆಂಗಳೂರಿನ ಜನತೆಗೆ ನೀರುಣಿಸುವ ಕಾವೇರಿಯ ಋಣಭಾರ ಮುಖ್ಯಮಂತ್ರಿ ಸೇರಿ ಚುನಾಯಿತ ಜನಪ್ರತಿನಿಧಿಗಳಿಂದ ಹಿಡಿದು ಸಾಮಾನ್ಯ ಜನರ ಮೇಲಿದೆ, ಇದನ್ನ ಆಳುವವರು ಅರಿಯಬೇಕಾಗಿತ್ತು, ಕಾವೇರಿ ಮಾತೆಗೆ ಅನ್ಯಾಯ ಆದರೆ ಕರುನಾಡಿಗೆ ಅನ್ಯಾಯ ಆದಂತೆ, ಇಂತಹ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸಬೇಕಾದದ್ದು ಸರ್ಕಾರದ ಜವಾಬ್ದಾರಿ, ಆದರೆ ಬರಗಾಲದ ಪರಿಸ್ಥಿತಿಯಲ್ಲಿ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿರುವುದು ನಾಡಿನ ಜನತೆಗೆ ಮಾಡಿದ ದ್ರೋಹ ಎಂದು ಹೇಳಿದರು.