ಜೆಡಿಎಸ್ ರೈತರ ಪಕ್ಷ, ಗುಲಾಮಗಿರಿ ಕಾಂಗ್ರೆಸ್ ಸಂಸ್ಕೃತಿ: ಕುಮಾರಸ್ವಾಮಿ ವಾಗ್ದಾಳಿ

ಹೊಸದಿಗಂತ ವರದಿ,ಮಂಡ್ಯ :

ಗುಲಾಮಗಿರಿ ಎನ್ನುವುದು ಕಾಂಗ್ರೆಸ್ ಸಂಸ್ಕೃತಿ. ಜೆಡಿಎಸ್ ರೈತರ ಪಕ್ಷವೇ ಹೊರತು ಗುಲಾಮಗಿರಿ ಪಕ್ಷವಲ್ಲ. ನಾವು ಯಾವ ಕಾಲದಲ್ಲೂ ಜನರನ್ನು ಗುಲಾಮರನ್ನಾಗಿ ಮಾಡಿಲ್ಲ. ಜನರ ಗುಲಾಮರಾಗಿ ಕೆಲಸ ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್‌ನ್ನು ಗುರಿಯಾಗಿಸಿಕೊಂಡು ವಾಕ್‌ಪ್ರಹಾರ ನಡೆಸಿದರು.

ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಜಾತ್ಯತೀತ ಜನತಾದಳದ ವತಿಯಿಂದ ಆಯೋಜಿಸಿದ್ದ ಮಂಡ್ಯ ಲೋಕಸಭೆ ಚುನಾವಣೆಯ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿ, ಡಾ.ಮಂಜುನಾಥ್ ಅವರನ್ನು ಸ್ಪರ್ಧೆ ಮಾಡುವಂತೆ ನಾನು ಹೇಳಿಲ್ಲ. ಅವರೂ ಸಹ ಬಯಸಿರಲಿಲ್ಲ. ಜನರ ಒತ್ತಾಯದ ಮೇರೆಗೆ ಅವರು ರಾಜಕೀಯಕ್ಕೆ ಬಂದಿದ್ದಾರೆ. ಈಗ ಕಾಂಗ್ರೆಸ್‌ನವರು ದೇವೇಗೌಡರ ಕುಟುಂಬದ ಗುಲಾಮರಾಗೋದು ಬೇಡ ಎಂದು ಹೇಳುತ್ತಿದ್ದಾರೆ. ನಾವು ರಾಮನಗರ ಜನರನ್ನು ಗುಲಾಮರನ್ನಾಗಿ ಮಾಡಿಕೊಂಡಿಲ್ಲ. ನಾವು ಅವರ ಸೇವಕರಾಗಿದ್ದೇವೆ. ರಾಮನಗರ ಜನರನ್ನು ಗುಲಾಮರನ್ನಾಗಿ ಕಾಣೋದು ಕಾಂಗ್ರೆಸ್‌ನವರು ಎಂದು ಹರಿಹಾಯ್ದರು.

ದೇವೇಗೌಡರಿಗೆ ರಾಜಕೀಯವಾಗಿ ಹಾಸನಕ್ಕಿಂತ ಹೆಚ್ಚು ಶಕ್ತಿ ನೀಡಿದ್ದು ಮಂಡ್ಯ ಜಿಲ್ಲೆ. ನನ್ನ ಮಾತುಗಳು ನಾಟಕೀಯ ಮಾತಲ್ಲ. ನಾನು, ನನ್ನ ಕುಟುಂಬದ ಯಾರೂ ಯಾರಿಗೂ ದ್ರೋಹ ಮಾಡಿದವರಲ್ಲ. ಬೆಳೆಯುವವವರ ಹಿಂದೆ ನಿಂತು ಶಕ್ತಿ ತುಂಬಿದ್ದೇವೆ ಎಂದು ಸಚಿವ ಚಲುವರಾಯಸ್ವಾಮಿ ಗುರಿಯಾಗಿಸಿಕೊಂಡು ಹೇಳಿದರು.

ನಾವು ಮಹಾರಾಜರ ವಂಶಸ್ಥರಲ್ಲ
ಹೊಟ್ಟೆಪಾಡಿಗಾಗಿ ಜೆಡಿಎಸ್ ಕುಟುಂಬ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಎಂಬ ಚಲುವರಾಯಸ್ವಾಮಿ ಮಾತಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರು (ಚಲುವರಾಯಸ್ವಾಮಿ) ಮಹಾರಾಜರ ವಂಶಸ್ಥರು. ನಾವು ಸಾಮಾನ್ಯ ರೈತ ಕುಟುಂಬದಿಂದ ಬಂದವರು ಎಂದು ಅಣಕಿಸಿದರಲ್ಲದೆ, ರಾಜಕಾರಣಕ್ಕೆ ಯಾವ ರೀತಿ ಅವರು ಬಂದರು, ಯಾವ ರೀತಿ ಬೆಳೆದರು ಎನ್ನುವುದು ನನಗೆ ಗೊತ್ತಿದೆ. 1999ರ ಚುನಾವಣೆ ವೇಳೆ ಬೆಳ್ಳೂರಿನಲ್ಲಿ ನಾನು ಭಾಷಣ ಮಾಡುತ್ತಾ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಚಲುವರಾಯಸ್ವಾಮಿ ಮಂತ್ರಿ ಮಾಡುತ್ತೇನೆ. ಅವರನ್ನು ಗೆಲ್ಲಿಸಿಕೊಡಿ ಎಂದು ಜನರಲ್ಲಿ ಮನವಿ ಮಾಡಿದ್ದೆ. ಆದರೆ, ಆ ಚುನಾವಣೆಯಲ್ಲಿ ಚಲುವರಾಯಸ್ವಾಮಿಯನ್ನು ಬಿಟ್ಟು ನಾವೆಲ್ಲರೂ ಸೋತಿದ್ದಾಗಿ ನೆನೆಸಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!