ಹೊಸದಿಗಂತ ವರದಿ ಹುಬ್ಬಳ್ಳಿ:
ಜೆಡಿಎಸ್ ಪಕ್ಷ ಬಿಜೆಪಿಯ ʻಬಿʼ ಟೀಮ್ ಎಂದು ಮೊದಲಿನಿಂದಲೂ ನಾನು ಹೇಳುತ್ತಿದ್ದೆ, ಅದು ಈಗ ಸಾಬಿತಾಗಿದೆ. ಜಾತ್ಯಾತೀತ ಎಂದು ಹೇಳಿಕೊಳ್ಳುವ ಜೆಡಿಎಸ್, ಕೋಮುವಾದಿ ಬಿಜೆಪಿಯೊಂದಿಗೆ ಕೈಗೂಡಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಮಹದಾಯಿ, ಕಾವೇರಿ, ಬರಗಾಲದ ಬಗ್ಗೆ ಎರಡು ವಾರದ ಹಿಂದೆ ಪ್ರಧಾನಿಗೆ ಪತ್ರ ಬರೆದು ಸರ್ವಪಕ್ಷ ನಿಯೋಗದ ಭೇಟಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದ್ದು, ಕೇಂದ್ರ ಸರ್ಕಾರ ಇದುವರೆಗೂ ಸ್ಪಂದಿಸಿಲ್ಲ ಎಂದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಜಿ. 20 ಶೃಂಗಸಭೆಗೆ ಆಹ್ವಾನಿಸಿಲ್ಲ. ಇನ್ನೂ ನಾನು ಸಹ ಅದರ ಔತಣಕೂಟದಲ್ಲಿ ಭಾಗವಹಿಸುವುದಿಲ್ಲ ಎಂದರು.
ರಾಷ್ಟ್ರ ರಾಜಕಾರದಲ್ಲಿ ನನಗೆ ಆಸಕ್ತಿ ಇಲ್ಲ. ಕೆಲವರು ಅವರ ಅಭಿಪ್ರಾಯ ತಿಳಿಸಿದ್ದಾರೆ. ಈ ಬಗ್ಗೆ ನಾನು ಏನು ಹೇಳುವುದಿಲ್ಲ ಎಂದರು.