ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್‌ನ ಚಾತ್ರಾ ಜಿಲ್ಲೆಯಲ್ಲಿ ಏರ್ ಆಂಬುಲೆನ್ಸ್ ಪತನಗೊಂಡು ಏಳು ಮಂದಿ ಮೃತಪಟ್ಟಿದ್ದು, ಅಧಿಕಾರಿಗಳು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.
ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ನಡೆಸುತ್ತಿದ್ದ ಬೀಚ್‌ಕ್ರಾಫ್ಟ್ ಸಿ90 ಏರ್ ಆಂಬುಲೆನ್ಸ್ ರಾಂಚಿಯಿಂದ ದೆಹಲಿಗೆ ತೆರಳುವ ಮಾರ್ಗದಲ್ಲಿ ಚಾತ್ರಾ ಜಿಲ್ಲೆಯಲ್ಲಿ ಪತನಗೊಂಡಿತ್ತು.
ಇದೀಗ ಮೃತಪಟ್ಟ ಎಲ್ಲಾ ಏಳು ಮಂದಿಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ರಾಂಚಿ ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್ ಕುಮಾರ್ ಪ್ರಕಾರ, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಅಪಘಾತಕ್ಕೆ ಕಾರಣವಾಗಿರಬಹುದು. ಆದರೆ ನಿಖರ ಕಾರಣವನ್ನು ಅಧಿಕೃತ ತನಿಖೆಯ ನಂತರವೇ ತಿಳಿದುಬರುವುದು ಎಂದು ತಿಳಿಸಿದ್ದಾರೆ.
ಮೃತರನ್ನು ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್, ಕ್ಯಾಪ್ಟನ್ ಸವರಾಜ್‌ದೀಪ್ ಸಿಂಗ್, ಸಂಜಯ್ ಕುಮಾರ್, ಡಾ. ವಿಕಾಸ್ ಕುಮಾರ್ ಗುಪ್ತಾ, ಸಚಿನ್ ಕುಮಾರ್ ಮಿಶ್ರಾ, ಅರ್ಚನಾ ದೇವಿ ಮತ್ತು ಧುರು ಕುಮಾರ್ ಎಂದು ಗುರುತಿಸಲಾಗಿದೆ.
ವಿಮಾನ ಅಪಘಾತದ ಕಾರಣವನ್ನು ಪತ್ತೆಹಚ್ಚಲು ಏರ್‌ಕ್ರಾಫ್ಟ್ ಅಪಘಾತ ತನಿಖಾ ಬ್ಯೂರೋ (AAIB) ತಂಡವನ್ನು ಅಪಘಾತ ಸ್ಥಳಕ್ಕೆ ಕಳುಹಿಸಲಾಗಿದೆ.



