ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆದ್ದಾರಿ ದುಸ್ತಿಯನ್ನು ಶೀಘ್ರವೇ ಮಾಡುವಂತೆ ಒತ್ತಾಯಿಸಿ ಜಾರ್ಖಂಡ್ ನ ಶಾಸಕಿಯೊಬ್ಬರು ರಸ್ತೆಯ ಹೊಂಡದಲ್ಲಿರುವ ಕೆಸರಿನಲ್ಲಿ ಮಿಂದೇಳುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 133 ದುರಸ್ತಿಗೆ ಒತ್ತಾಯಿಸಿ ಜಾರ್ಖಂಡ್ ಶಾಸಕಿ ದೀಪಿಕಾ ಪಾಂಡೆ ಸಿಂಗ್ ಬುಧವಾರ ಕೆಸರುಮಯ ರಸ್ತೆಯಲ್ಲಿ ಕುಳಿತು ರಸ್ತೆಯ ನೀರಿನಲ್ಲಿ ಸ್ನಾನ ಮಾಡುವ ಮೂಲಕ ಪ್ರತಿಭಟಿಸಿದ್ದಾರೆ. ಅದನ್ನು ಸರಿಪಡಿಸುವ ಕೆಲಸ ಪ್ರಾರಂಭವಾಗುವವರೆಗೂ ಅವರು ರಸ್ತೆಯಿಂದ ಮೇಲೇಳುವುದಿಲ್ಲ ಎಂದು ಸಿಂಗ್ ಹೇಳಿದರು.
ಹಿಂದಿನಿಂದಲೂ ರಸ್ತೆ ಹದಗೆಟ್ಟಿದ್ದು, ರಸ್ತೆಯಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ ಎಂದು ಗೊಡ್ಡಾದ ಶಾಸಕಿ ದೀಪಿಕಾಸಿಂಗ್ ಪಾಂಡೆ ಕಿಡಿಕಾರಿದ್ದಾರೆ.
ಈ ಹಿಂದೆ ಹಲವು ಬಾರಿ ರಸ್ತೆ ದುರಸ್ತಿ ಮಾಡಲಾಗಿತ್ತು ಆದರೆ ಪ್ರತಿ ದುರಸ್ತಿಯ ನಂತರ ಪರಿಸ್ಥಿತಿ ಹದಗೆಡುತ್ತಿದೆ. ಆದ್ದರಿಂದ ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.