ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೆಡೆ ಉತ್ತರಕೊರಿಯಾವು ಕ್ಷಿಪಣಿ ಪರೀಕ್ಷೆಗಳ ಸುರಿಮಳೆ ಸುರಿಸುತ್ತಿದ್ದರೆ ಇನ್ನೊಂದೆಡೆ ಚೀನಾದ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ತಾವು ಉತ್ತರಕೊರಿಯಾದೊಂದಿಗೆ ʼವಿಶ್ವಶಾಂತಿʼಗಾಗಿ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಉತ್ತರಕೊರಿಯಾದ ಕಿಮ್ ಜಾಂಗ್ ಉನ್ ಅವರೊಂದಿಗೆ ʼವಿಶ್ವಶಾಂತಿʼ ಕೆಲಸಮಾಡಲು ಬೀಜಿಂಗ್ ಉತ್ಸುಕವಾಗಿದೆ ಎಂದು ಜಿನ್ ಪಿಂಗ್ ಹೇಳಿದ್ದಾರೆ ಎಂದು ಉತ್ತರ ಕೊರಿಯಾದ ರಾಜ್ಯ ಮಾಧ್ಯಮ ವರದಿ ಮಾಡಿದೆ.
ಉತ್ತರ ಕೊರಿಯಾವು ಇತ್ತೀಚೆಗಷ್ಟೇ ಶಕ್ತಿಶಾಲಿ ಖಂಡಾಂತರ ಕ್ಷಿಪಣಿಗಳ ಪರೀಕ್ಷೆ ನಡೆಸಿದೆ. ಅಲ್ಲದೇ ಅಮೆರಿಕದ ಬೆದರಿಕೆಯ ನಡುವೆಯೇ ಸ್ವಂತ ಅಣ್ವಸ್ತ್ರ ಹೊಂದುವುದಾಗಿ ಹೇಳಿದೆ. ಇವೆಲ್ಲದರ ನಡುವೆಯೇ ಜಿನ್ ಪಿಂಗ್ ಈ ಹೇಳಿಕೆ ನೀಡಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಏಕೆಂದರೆ ಉತ್ತರಕೊರಿಯಾಗೆ ಅಣ್ವಸ್ತ್ರ ಹೊಂದಲು ಚೀನಾ ಸಹಾಯ ಮಾಡಲಿದೆಯೇ ಎಂಬುದರ ಕುರಿತು ಅನುಮಾನಗಳು ಹುಟ್ಟಿಕೊಂಡಿವೆ.
ಜಗತ್ತಿನಲ್ಲಿ ಅಭೂತಪೂರ್ವ ಬದಲಾವಣೆಗಳು ನಡೆಯುತ್ತಿರುವುದರಿಂದ ಪ್ರದೇಶ ಮತ್ತು ಪ್ರಪಂಚದ ಶಾಂತಿ, ಸ್ಥಿರತೆ, ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಉತ್ತರ ಕೊರಿಯಾದೊಂದಿಗೆ ಕೆಲಸ ಮಾಡಲು ಬೀಜಿಂಗ್ ಸಿದ್ಧವಾಗಿದೆ ಎಂದು ಕಿಮ್ಗೆ ನೀಡಿದ ಸಂದೇಶದಲ್ಲಿ ಕ್ಸಿ ಹೇಳಿದ್ದಾರೆ ಎಂದು ಪ್ಯೊಂಗ್ಯಾಂಗ್ನ ಅಧಿಕೃತ ಕೊರಿಯನ್ ಕೇಂದ್ರ ಸುದ್ದಿ ಸಂಸ್ಥೆ (ಕೆಸಿಎನ್ಎ) ವರದಿ ಮಾಡಿದೆ.