ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲ ದಿನಗಳಿಂದ ದೇಶದ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಬೆಲೆಯೇರಿಕೆಯ ಬಿಸಿ ಮುಟ್ಟಿಸಿದ್ದು, ರಿಲಯನ್ಸ್ ಜಿಯೋ ಹಾಗೂ ಏರ್ಟೆಲ್ ಕಂಪನಿಗಳು ಪ್ರಿಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಬೆಲೆಗಳನ್ನು ಏರಿಕೆ ಮಾಡಿದ್ದು, ಇದರ ಜೊತೆಗೆ ವೋಡಾಫೋನ್ ಐಡಿಯಾ ಸಂಸ್ಥೆಯೂ ಬೆಲೆಯೇರಿಕೆ ಮಾಡಿದೆ.
ಹಾಗಾಗಿ, ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ, ರಿಚಾರ್ಜ್ ಶುಲ್ಕವನ್ನು ಕಡಿಮೆ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಮಹತ್ವದ ಸ್ಪಷ್ಟನೆ ನೀಡಿದೆ. ಯಾವುದೇ ಕಾರಣಕ್ಕೂ ಖಾಸಗಿ ಟೆಲಿಕಾಂ ಕಂಪನಿಗಳ ವಿಷಯದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದಿದೆ.
‘ಖಾಸಗಿ ಕಂಪನಿಗಳ ಬೆಲೆಯೇರಿಕೆ ವಿಷಯದಲ್ಲಿ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಲು ಆಗುವುದಿಲ್ಲ. ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (TRAI) ನಿಯಮಗಳ ಅನ್ವಯವೇ ಖಾಸಗಿ ಟೆಲಿಕಾಂ ಕಂಪನಿಗಳು ಬೆಲೆಯೇರಿಕೆ ಸೇರಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ಹಾಗಾಗಿ, ಇಂತಹ ವಿಷಯದಲ್ಲಿ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಲು ಆಗುವುದಿಲ್ಲ’ ಎಂದು ಕೇಂದ್ರ ಸರ್ಕಾರವು ಪ್ರಕಟಣೆ ತಿಳಿಸಿದೆ.
ಮೂರೂ ಟೆಲಿಕಾಂ ಕಂಪನಿಗಳು ಬೆಲೆಯೇರಿಕೆ ಮಾಡಿದ ಕಾರಣ ಸರ್ಕಾರವು ಬೆಲೆ ಇಳಿಸಬೇಕು ಎಂಬುದಾಗಿ ಜನ ಆಗ್ರಹಿಸಿದ್ದರು.