ಹೊಸದಿಗಂತ ಡಿಜಿಟಲ್ ಡೆಸ್ಕ್:
ಜ್ಞಾನವಾಪಿ ಮಸೀದಿಯಲ್ಲಿ ASI ಸಮೀಕ್ಷೆ ಆರಂಭಗೊಂಡಿದ್ದು, ಇದರ ನಡುವೆ ಅಹಮದಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು ವಿರೋಧಿಸಿ ಅಂಜುಮನ್ ಇಂತೇಜಮಿಯಾ ಮಸೀದಿ ಸಮಿತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸಮೀಕ್ಷೆಗೆ ತಡೆ ನೀಡುವ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು ಈ ಹಂತದಲ್ಲಿ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದೆ.
ಜ್ಞಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್ಐ) ಸಮೀಕ್ಷೆಇತಿಹಾಸವನ್ನು ಕೆದಕುತ್ತದೆ. ಇದು ‘ಹಿಂದಿನ ಗಾಯಗಳನ್ನು ಮತ್ತೆ ತೆರೆದಂತಾಗುತ್ತದೆ’ ಎಂದು ಮುಸ್ಲಿಂ ಸಂಘಟನೆ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ವಾದಿಸಿತ್ತು.
ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, ನೀವು ಒಂದೇ ಒಂದು ಆಧಾರದ ಮೇಲೆ ಪ್ರತಿ ಮಧ್ಯಂತರ ಆದೇಶವನ್ನು ವಿರೋಧಿಸಲು ಸಾಧ್ಯವಿಲ್ಲ. ನಿಮ್ಮ ಆಕ್ಷೇಪಣೆಗಳನ್ನು ವಿಚಾರಣೆಯ ಸಮಯದಲ್ಲಿ ನಿರ್ಧರಿಸಲಾಗುತ್ತದೆ ಎಂದು ಹೇಳಿದೆ.
ಸಮೀಕ್ಷೆಯಲ್ಲಿ ಯಾವುದೇ ಸ್ಥಳದಲ್ಲಿ ಯಾವುದೇ ಹಾನಿಯಾಗುವುದಿಲ್ಲ ಎಂದು ಎಎಸ್‌ಐ ಭರವಸೆ ನೀಡಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಇದರೊಂದಿಗೆ ಸರ್ವೆ ಬಗ್ಗೆ ಹೈಕೋರ್ಟ್ ಹೇಳಿದ್ದು, ಸಮೀಕ್ಷೆಯಿಂದ ಸಾಕ್ಷ್ಯ ಮಾತ್ರ ಹೊರಬರಲಿದೆ ಎಂದು ಕೋರ್ಟ್ ಹೇಳಿದೆ. ಇದು ನಿಮ್ಮ ವಿಷಯದಲ್ಲಿ ಉಪಯುಕ್ತವಾಗುತ್ತದೆ, ಇದರಲ್ಲಿ ನೀವು ನಮ್ಮ ಅಯೋಧ್ಯೆ ನಿರ್ಧಾರವನ್ನ ನೋಡಬಹುದು. ಪ್ರತಿಯೊಂದು ಪ್ರಕ್ರಿಯೆಯನ್ನ ಸವಾಲು ಮಾಡಲಾಗುವುದಿಲ್ಲ ಎಂದಿದೆ.
ವಿಚಾರಣೆ ವೇಳೆ ಸಮೀಕ್ಷೆಯು 1947ರಲ್ಲಿ ಅಸ್ತಿತ್ವದಲ್ಲಿದ್ದ ಧಾರ್ಮಿಕ ಸ್ಥಳಗಳ ಸ್ವರೂಪವನ್ನು ಬದಲಾಯಿಸುವುದನ್ನು ನಿಷೇಧಿಸುವ 1991ರ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆಯನ್ನು ಉಲ್ಲಂಘಿಸುತ್ತದೆ ಎಂದು ಮಸೀದಿ ನಿರ್ವಹಣಾ ಸಮಿತಿಯ ಪರವಾಗಿ ಹಾಜರಾದ ಹಿರಿಯ ವಕೀಲ ಹುಝೆಫಾ ಅಹ್ಮದಿ ಹೇಳಿದರು. ಜ್ಞಾನವಾಪಿ ಮಸೀದಿಯಲ್ಲಿ ಎಎಸ್ಐ ಸಮೀಕ್ಷೆಗೆ ಅನುಮತಿ ನೀಡಿದ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ಮಸೀದಿ ಸಮಿತಿಯ ಮನವಿಯನ್ನು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದಿತ್ತು. ಮಸೀದಿಯನ್ನು ಈ ಮೊದಲು ಕಟ್ಟಲಾಗಿದ್ದ ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಸಮೀಕ್ಷೆ ನಡೆಸುವಂತೆ ಎಎಸ್ಐಗೆ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜ್ಞಾನವಾಪಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.