ಜೋಗ ಜಲಪಾತಕ್ಕೆ ರೋಪ್ ವೇ, ಫೈವ್‌ಸ್ಟಾರ್ ಹೊಟೇಲ್ ನಿರ್ಮಾಣ: ಇಲ್ಲಿವೆ ಕರ್ನಾಟಕ ಸಂಪುಟದ ನಿರ್ಣಯಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾಧ್ಯಮಗಳಿಗೆ ವಿವರಿಸಿದ್ದಾರೆ.

ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

* ಕರ್ನಾಟಕ ಆಯುಷ್ ಇಲಾಖೆಯಲ್ಲಿರುವ ಖಾಲಿ ಇರುವ 177 ಹುದ್ದೆಗಳಲ್ಲಿ 80 ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ಮಾಡಲು ತೀರ್ಮಾನ.

* ಈಗಾಗಲೇ ಗುತ್ತಿಗೆ ಆಧಾರದಲ್ಲಿರುವ ನೌಕರರಿಗೆ ಪ್ರತೀ ವರ್ಷದ ಸೇವೆಗೆ 2ರಂತೆ 10 ವರ್ಷಕ್ಕೆ 20 ಅಂಕಗಳನ್ನು ನೀಡಲು ಹಾಗೂ ಒಂದು ವರ್ಷ ಸೇವೆ ಮಾಡಿದವರಿಗೆ ಗರಿಷ್ಠ 10 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಲು ನಿರ್ಧಾರ.

* ಡಾ. ಅಂಬರೀಷ್ ಅವರ ಸ್ಮಾರಕ ನಿರ್ಮಾಣ ಮಾಡಲು ಸರಕಾರ ತೀರ್ಮಾನಿಸಿದೆ. ಅದಕ್ಕಾಗಿ ₹ 12 ಕೋಟಿ ಅನುದಾನ ನೀಡಿ, ರಾಜ್‌ಕುಮಾರ್ ಅವರ ಸ್ಮಾರಕದ ಪಕ್ಕದಲ್ಲಿಯೇ ಸ್ಮಾರಕ ನಿರ್ಮಿಸಲಾಗುತ್ತದೆ.

* ಬೆಂಗಳೂರು ಜಿಲ್ಲೆಯ ಪೂರ್ವ ತಾಲೂಕಿನ 22 ಕೆರೆಗಳಿಗೆ ಹಾಗೂ ಹೊಸಕೋಟೆ ತಾಲೂಕಿನ ಹೊಸಕೋಟೆ ಕೆರೆಗೆ ಕೆ.ಆರ್. ಪುರಂ ತ್ಯಾಜ್ಯ ನೀರಿಂದ ನೀರು ತುಂಬಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಸಣ್ಣ ನೀರಾವರಿ ಇಲಾಖೆ ವತಿಯಿಂದ ₹ 93.5 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.

* ಕಾರ್ಕಳದಲ್ಲಿ ನ್ಯಾಯಾಲಯ ಸಂಕೀರ್ಣ ಕಟ್ಟಡಕ್ಕೆ ಪರಿಷ್ಕೃತ ಅಂದಾಜಿನಲ್ಲಿ ₹ 19.73 ಕೋಟಿ ಹಾಗೂ
ಮುಳುಬಾಗಿಲು ನ್ಯಾಯಾಲಯ ಸಂಕೀರ್ಣಕ್ಕೆ ₹ 16.8 ಕೋಟಿ ಅನುದಾನ ಮಂಜೂರು.

* ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಚೇರಿಗೆ ರಾಜ್ಯಾದ್ಯಂತ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಲು ₹ 406.44 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ.

* ಜಲಜೀವನ್ ಮಿಷನ್ ಅಡಿಯಲ್ಲಿ 2024ರೊಳಗೆ ಎಲ್ಲ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ನೀಡಲು ರಾಜ್ಯದ ಶೇ. 45ರಷ್ಟು ಪಾಲು ನೀಡಲು ₹1167 ಕೋಟಿ ವಿಶ್ವಬ್ಯಾಂಕ್‌ನಿಂದ ಸಾಲ ಪಡೆಯಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

* ಜೋಗ ಜಲಪಾತವನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು (ರೋಪ್ ವೇ ಮತ್ತು ಫೈವ್‌ಸ್ಟಾರ್ ಹೊಟೇಲ್) ₹116 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

* ತುಮಕೂರು ಜಿಲ್ಲೆಯ 70 ಕೆರೆಗಳಿಗೆ ಎತ್ತಿನಹೊಳೆ ಯೋಜನೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳಿಂದ ನೀರು ತುಂಬಿಸಲು ಸಣ್ಣ ನೀರಾವರಿ ಇಲಾಖೆಯಿಂದ ₹250 ಕೋಟಿ ಆಡಳಿತಾತ್ಮಕ ಅನುಮೋದನೆ ನೀಡಿದೆ.

* ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆಗಳಿಗೆ ನಗರೋತ್ಥಾನದಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ರಾಜ್ಯದ 302 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಅನುಷ್ಠಾನಕ್ಕೆ ₹3885 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

* ಬಿಬಿಎಂಪಿ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗೆ ನಗರೋತ್ಥಾನ ಯೋಜನೆಯಲ್ಲಿ ಅನುಮೋದನೆ ನೀಡಲಾಗಿದೆ. ಇದರಲ್ಲಿ ಮೂರು ವರ್ಷದಲ್ಲಿ ₹6000 ಕೋಟಿ ವ್ಯಯಿಸಲು ತೀರ್ಮಾನಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!