Tuesday, March 28, 2023

Latest Posts

ಉತ್ತರ ಭಾರತದ ಜೋಶಿ ಮಠದ ಸ್ಥಿತಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಬರಬಾರದು: ಡಾ.ಎಸ್.ಎಲ್.ಭೈರಪ್ಪ

ಹೊಸ ದಿಗಂತ ವರದಿ, ಮೈಸೂರು:

ಉತ್ತರ ಭಾರತದ ಹಿಮಾಲಯ ತಪ್ಪಲಿನಲ್ಲಿರುವ ಜೋಶಿ ಮಠದ ಭೂಕುಸಿತದ ಸ್ಥಿತಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ
ಬರಬಾರದು ಎಂದು ಸರಸ್ವತಿ ಸಮ್ಮಾನ್, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಹಿರಿಯ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಸರ್ಕಾರಕ್ಕೆ ಗಂಭೀರ ಎಚ್ಚರಿಕೆ ನೀಡಿದರು.

ಶನಿವಾರ ಸಂಜೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಹೆಚ್.ವಿ.ರಾಜೀವ್ ಸ್ನೇಹ ಬಳಗ, ಹೊಯ್ಸಳ ಕರ್ನಾಟಕ ಸಂಘ ಹಾಗೂ ಮೈಸೂರಿನ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪದ್ಮ ಪುರಸ್ಕೃತರಿಗೆ ವಂದನೆ, ಅಭಿನಂದನೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಹಳ ವರ್ಷಗಳ ಹಿಂದೆ ನಾನು ಹಣ ಕೂಡಿಸಿಕೊಂಡು ಉತ್ತರ ಭಾರತ ಹಿಮಾಲಯ ಪರ್ವತ ಪ್ರದೇಶದ ಪ್ರವಾಸಿ ತಾಣಗಳಿಗೆ ಹೋಗಿದ್ದೆ. ಆಗೆಲ್ಲಾ ವಾಹನಗಳ ವ್ಯವಸ್ಥೆಯಿರಲಿಲ್ಲ. ಹಾಗಾಗಿ ನಡೆದುಕೊಂಡೇ ಹೋಗಬೇಕಾಗಿತ್ತು. ಹಾಗಾಗಿ ನಡೆದುಕೊಂಡು ಜೋಶಿ ಮಠಕ್ಕೆ ಹೋಗಿದ್ದೆ. ಅದನ್ನು ಜೋತಿರ್ ಮಠ ಎಂದು ಕರೆಯುತ್ತಿದ್ದರು. ಅಲ್ಲಿ ಶಿವಲಿಂಗವೊOದಿದೆ. ಅದರ ಮುಂದೆ ಒಂದು ದೀಪವಿದ್ದು, ಒಂದು ಬತ್ತಿ ಹಚ್ಚಿರುತ್ತಾರೆ. ಅಲ್ಲಿಗೆ ಹೋಗುವ ಭಕ್ತರು ಉದ್ದರಣೆಯಲ್ಲಿ ಆ ದೀಪಕ್ಕೆ ಎಣ್ಣೆ ಹಾಕುವುದೇ ಪೂಜೆ ಸಲ್ಲಿಸಿದಂತಾಗುತ್ತಿತ್ತು. ಅಲ್ಲಿ ಉಳಿದುಕೊಳ್ಳುವುದಕ್ಕೆ, ಊಟಕ್ಕೆ ಮಠದವರೇ ವ್ಯವಸ್ಥೆ ಮಾಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಜೋತಿರ್ ಮಠವನ್ನು ಪ್ರವಾಸಿ ತಾಣವನ್ನಾಗಿ ಮಾಡಿ, ಅಲ್ಲಿ ವಾಣಿಜ್ಯ ಕಟ್ಟಡಗಳನ್ನು ಕಟ್ಟಲಾಗಿದೆ. ವಿಪರೀತವಾಗಿ ವಾಹನಗಳ ಸಂಚಾರದ ವ್ಯವಸ್ಥೆಯಿದೆ. ಇದರಿಂದಾಗಿಯೇ ಅಲ್ಲಿ ಭೂಕುಸಿತವಾಗುತ್ತಿದ್ದು, ಜೋತಿರ್ ಮಠ ಮುಳುಗುತ್ತಿದೆ ಎಂದು ಹೇಳಿದರು.

ಚಾಮುಂಡಿಬೆಟ್ಟಕ್ಕೆ ಆ ಗತಿ ಬರುವುದು ಬೇಡ

ಜೋತಿರ್ ಮಠಕ್ಕೆ ಆಗಿರುವ ಸ್ಥಿತಿ ಈಗ ಮೈಸೂರಿನ ಚಾಮುಂಡಿಬೆಟ್ಟಕ್ಕೂ ಬರುತ್ತಿದೆ. ಈ ಬೆಟ್ಟದಲ್ಲಿ ಈಗ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ, ಕಟ್ಟಡಗಳನ್ನು ಕಟ್ಟುತ್ತೇವೆ ಎಂದು ಹೇಳುತ್ತಿದ್ದಾರೆ. ಬೇಡ ಎಂದು ಯಾರೇ ಹೇಳಿದರೂ, ಯಾರ ಮಾತನ್ನೂ ಕೇಳುತ್ತಿಲ್ಲ. ಕಾರಣ ಭ್ರಷ್ಟಾಚಾರ. ಚಾಮುಂಡಿಬೆಟ್ಟಕ್ಕೆ ರೋಪ್ ವೇ ನಿರ್ಮಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಅದಕ್ಕಾಗಿ ಬಂಡೆಗಳನ್ನು ಒಡೆದು ಕಂಬಗಳನ್ನು ನೆಟ್ಟರೆ ಬೆಟ್ಟ ಉಳಿಯುತ್ತದೆಯೇ. ಈಗಾಗಲೇ ಚಾಮುಂಡಿಬೆಟ್ಟದಲ್ಲಿ ಹಲವಾರು ಭೂಕುಸಿತ ಪ್ರಕರಣಗಳು ನಡೆದಿವೆ. ಹೀಗಿದ್ದರೂ, ಬೆಟ್ಟದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಹೊರಟರೆ ಮುಂದೊOದು ದಿನ ಜೋತಿರ್ ಮಠಕ್ಕೆ ಆಗಿರುವ ಸ್ಥಿತಿ ಚಾಮುಂಡಿಬೆಟ್ಟಕ್ಕೂ ಬರುತ್ತದೆ. ಹಾಗಾಗುವುದಕ್ಕೆ ಅವಕಾಶ ನೀಡಬಾರದು. ಈಗಲೇ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಬೆಟ್ಟದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಪಠ್ಯ ಪುಸ್ತಕಗಳಲ್ಲಿ ಮಾನವೀಯ ಮೌಲ್ಯಗಳೇ ಇಲ್ಲ
ಈಗಿನ ಪಠ್ಯ ಪುಸ್ತುಕಗಳಲ್ಲಿ ಮಾನವೀಯ ಮೌಲ್ಯಗಳ ಪಠವೇ ಇಲ್ಲದಂತಾಗಿದೆ. ಪಠ್ಯ ಪುಸ್ತಕ ಸಮಿತಿಯವರು ಪಠ್ಯಗಳ ಪರಿಷ್ಕರಣೆ ಮಾಡಲು ಹೋದಾಗ, ಗಲಾಟೆಗಳೇ ನಡೆದವು. ಈಗ 10 ಪಠ್ಯಗಳಿದ್ದನ್ನು 8ಕ್ಕೆ ಇಳಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಯಾವ ಪಠ್ಯದಲ್ಲೂ ಮಾನವೀಯ ಮೌಲ್ಯಗಳಿಲ್ಲ. ನಾವು ಓದುತ್ತಿದ್ದಾಗ ಪುಣ್ಯಕೋಟಿಯಂತಹ ಕಥೆಗಳ ಪಠ್ಯಗಳಿದ್ದವು. ಅದನ್ನು ಶಿಕ್ಷಕರು ಓದಿ ಹೇಳುತ್ತಿದ್ದರೆ, ನಮ್ಮ ಕಣ್ಣಲ್ಲಿ ನೀರು ಬರುತ್ತಿತ್ತು. ನಮ್ಮಲ್ಲಿ ಕೂಡ ಸತ್ಯ, ಪ್ರಾಮಾಣಿಕತೆಯ ಮೌಲ್ಯಗಳು ಮೈಗೂಡುತ್ತಿದ್ದವು. ಆದರೆ ಅಂತಹ ಯಾವುದೇ ಪಠ್ಯಗಳೂ ಇಲ್ಲವಾಗಿವೆ, ಯಾಕೇ ತೆಗೆದು ಹಾಕಿದ್ದೀರಿ ಎಂದು ಪ್ರಶ್ನಿಸಿದರೆ, ಏನೇನೋ ಪ್ರಶ್ನೆಗಳು ಕೇಳಿ ಬರುತ್ತವೆ. ಎಂದು ಬೇಸರ ವ್ಯಕ್ತಪಡಿಸಿದರು.

ಸಮಾರಂಭದ ಸಾನಿಧ್ಯವನ್ನು ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮಿ ವಹಿಸಿದ್ದರು. ಕುವೆಂಪು ಭಾಷಾ ಭಾರತಿ ಸಂಸ್ಥೆಯ ವಿಶ್ರಾಂತ ಮುಖ್ಯಸ್ಥ ಡಾ.ಪ್ರಧಾನ್ ಗುರುದತ್ತ ಮುಖ್ಯ ಭಾಷಣ ಮಾಡಿದರು. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಖ್ಯಾತ ಹಿರಿಯ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ಎಸ್.ಸುಬ್ಬರಾಮನ್, ವಿದುಷಿ ಜಯಲಕ್ಷ್ಮಿ ಅವರನ್ನು ಇದೇ ವೇಳೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಅಭಿನಂದಿತರ ಕುರಿತು ಡಾ.ಹೆಚ್.ವಿ.ನಾಗರಾಜರಾವ್, ಡಾ.ರೋಹಿತ್ ಈಶ್ವರ್, ಹೊನ್ನೂರು ಪ್ರಕಾಶ್ ಮಾತನಾಡಿದರು. ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!