ಶ್ರೀನಗರದಲ್ಲಿ ಎನ್‌ ಕೌಂಟರ್;‌ ಪತ್ರಕರ್ತನ ಸೋಗಿನಲ್ಲಿದ್ದ ಉಗ್ರ ಸೇರಿದಂತೆ ಇಬ್ಬರು ಭಯೋತ್ಪಾದಕರ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಶ್ರೀನಗರದ ರೈನಾವಾರಿ ಪ್ರದೇಶದಲ್ಲಿ ಬುಧವಾರ ಮುಂಜಾನೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್ ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.
ಹತರಾದ ಉಗ್ರರಲ್ಲಿ ಒಬ್ಬನನ್ನು ರಯೀಸ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಆತ ಪತ್ರಕರ್ತನಾಗಿದ್ದ. ಅನಂತನಾಗ್‌ ಪ್ರದೇಶದಲ್ಲಿದ್ದ ಆನ್‌ಲೈನ್ ನ್ಯೂಸ್ ಪೋರ್ಟಲ್ ʼವ್ಯಾಲಿ ನ್ಯೂಸ್ ಸರ್ವಿಸ್ʼ ಮಾಧ್ಯಮವನ್ನು ಅಹ್ಮದ್ ಭಟ್ ನಡೆಸುತ್ತಿದ್ದ ಎಂದು ಜಮ್ಮುಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.

ಭಟ್ ಕಳೆದ ವರ್ಷ ಆಗಸ್ಟ್‌ನಲ್ಲಿ ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಯಾಗಿದ್ದ. ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಆತನ ವಿರುದ್ಧ ಈಗಾಗಲೇ ಎರಡು ಎಫ್‌ಐಆರ್‌ಗಳು ದಾಖಲಾಗಿದ್ದವು. ಮಾಜಿ ಪತ್ರಕರ್ತ ಭಯೋತ್ಪಾದಕ ಅಪರಾಧಗಳಲ್ಲಿ ಭಾಗಿಯಾಗಿರುವುದು ಮಾಧ್ಯಮಗಳ ದುರುಪಯೋಗವನ್ನು ಸ್ಪಷ್ಟ ಸೂಚಿಸುತ್ತದೆ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ಜಮ್ಮು ಮತ್ತು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ. ಎನ್‌ಕೌಂಟರ್‌ನಲ್ಲಿ ಹತರಾದ ಮತ್ತೊಬ್ಬ ಭಯೋತ್ಪಾದಕನನ್ನು ಬಿಜ್‌ಬೆಹರಾ ನಿವಾಸಿ ಹಿಲಾಲ್ ಅಹ್ಮದ್ ರಹಮ್ ಎಂದು ಗುರುತಿಸಲಾಗಿದೆ.
ನಾಗರಿಕ ಹತ್ಯೆಗಳು ಸೇರಿದಂತೆ ಇತ್ತೀಚಿನ ಹಲವಾರು ಭಯೋತ್ಪಾದಕ ಅಪರಾಧಗಳಲ್ಲಿ ಈ ಇಬ್ಬರು ಭಾಗಿಯಾಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಎನ್‌ಕೌಂಟರ್ ಸ್ಥಳದಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!