ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ‘ವಕ್ಫ್ ಹಠಾವೋ, ದೇಶ ಬಚಾವೋ’ ಎಂಬ ಘೋಷಣೆಯೊಂದಿಗೆ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಗುರುವಾರ ಅಂತ್ಯವಾಗಿದೆ.
ಇಂದು ಧರಣಿ ಸ್ಥಳಕ್ಕೆ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಹಾಗೂ ಜೆಪಿಸಿ ಸದಸ್ಯ ತೇಜಸ್ವಿ ಸೂರ್ಯ ಅವರು ಭೇಟಿ ನೀಡಿ, ವಕ್ಪ್ ಬೋರ್ಡ್ ಸಮಸ್ಯೆ ಆಲಿಸಿ ಅಹವಾಲು ಸ್ವೀಕರಿಸಿದರು. ಅಲ್ಲದೆ ಎಲ್ಲಾ ಸಮಸ್ಯೆಗಳಿಗೆ ಹೊಸ ವಕ್ಪ್ ತಿದ್ದುಪಡಿ ಕಾಯ್ದೆ ಮೂಲಕ ಪರಿಹಾರ ನೀಡುವ ಭರವಸೆ ನೀಡಿದ ನಂತರ ಧರಣಿ ಹಿಂಪಡೆಯಲಾಯಿತು.
ಈ ವೇಳೆ ಮಾತನಾಡ ಪಾಲ್ ಅವರು, ಜೆಪಿಸಿ ಮೂಲಕ ವಕ್ಪ್ ಕಾಯ್ದೆಗೆ ಪಾರದರ್ಶಕ ತಿದ್ದುಪಡಿ ತರಲಾಗುವುದು. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುವುದು. ಭವಿಷ್ಯದಲ್ಲಿ ವಕ್ಪ್ ನಿಂದ ರೈತರಿಗೆ, ಮಠ, ಮಂದಿರ, ಐತಿಹಾಸಿಕ ಸ್ಮಾರಕ ಸೇರಿದಂತೆ ಯಾರಿಗೂ ತೊಂದರೆಯಾಗದಂತೆ ಅಗತ್ಯ ತಿದ್ದುಪಡಿ ತರಲು ಜೆಪಿಸಿ ಪೂರಕ ಸಲಹೆ ನೀಡಲಿದೆ ಎಂದು ಹೇಳಿದರು.