ಬೆಂಗಳೂರಿನಲ್ಲಿ ಜು. 6,7 ರಂದು ʼನಟನ ತರಂಗಿಣಿʼ 20ನೇ ವರ್ಷೋತ್ಸವ

ಹೊಸದಿಗಂತ ವರದಿ ಬೆಂಗಳೂರು:

ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ನಟನ ತರಂಗಿಣಿ ಸ್ಕೂಲ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ ಸಂಸ್ಥೆ – 20 ನೇ ವರ್ಷದ ಸಂಭ್ರಮೋತ್ಸವದ ಅಂಗವಾಗಿ ಜುಲೈ 6 ಮತ್ತು 7ರಂದು ‘ನಾದ ನೃತ್ಯಾನುಭವ’ ವಿಶೇಷ ಗಾಯನ, -ವಾದನ ಮತ್ತು ನೃತ್ಯ ಕಾರ್ಯಕ್ರಮ ಆಯೋಜಿಸಿದೆ.

ಬೆಂಗಳೂರಿನ ಜಯನಗರ 8ನೇ ಬಡಾವಣೆಯ ಶ್ರೀ ಜಯರಾಮ ಸೇವಾ ಮಂಡಳಿ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ನಟನ ತರಂಗಿಣಿ ಅಕಾಡೆಮಿಯ 5ನೇ ವಾರ್ಷಿಕೋತ್ಸವವೂ
ಸಂಗಮಗೊಂಡಿದೆ. ಜು. 6ರ ಶನಿವಾರ ಮಧ್ಯಾಹ್ನ 2.30ಕ್ಕೆ ನಟನ ತರಂಗಣಿ ವಿದ್ಯಾರ್ಥಿಗಳಿಂದ ಗಾಯನ ಮತ್ತು ವಾದ್ಯ ಸಂಗೀತ ಕಾರ್ಯಕ್ರಮದ ಮೂಲಕ ವಾರ್ಷಿಕೋತ್ಸವ ಶುಭಾರಂಭವಾಗಲಿದೆ.

ಸಂಜೆ 5ಕ್ಕೆ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಪ್ರೊ. ಅರವಿಂದ ಹೆಬ್ಬಾರ್, ಶಿವಮೊಗ್ಗದ ಸಂಗೀತ ಕಾರ್ಯಕ್ರಮಗಳ ಸಂಘಟಕ ಸುಬ್ರಹ್ಮಣ್ಯ ಶಾಸ್ತ್ರಿ, ಚೆನ್ನೈನ ದಾಸಪ್ರಕಾಶ್ ಕುಟುಂಬದ ಕೆ. ಗಂಗಾ ಪ್ರಸಾದ್, ಪುತ್ತೂರಿನ ಕರ್ನಾಟಕ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಶ್ರೀಹರಿ ಭಾಗವಹಿಸಲಿದ್ದಾರೆ .

ಶ್ರೀನಿವಾಸ್‌ಗೆ ನಾದಶ್ರೀ ಪ್ರಶಸ್ತಿ ಪ್ರದಾನ:
ಬೆಂಗಳೂರಿನ ಮೃದಂಗ ಮತ್ತು ತಬಲಾ ತಯಾರಕ ವಿದ್ವಾನ್ ಶ್ರೀನಿವಾಸ ಅನಂತ ರಾಮಯ್ಯ ಅವರಿಗೆ ‘ನಾದ ಶ್ರೀ’ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಸಂಜೆ 5:30ಕ್ಕೆ ನಟನ ತರಂಗಣಿ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿಶೇಷ ನೃತ್ಯ ಪ್ರದರ್ಶನವಿದೆ. ಮೃದಂಗ ಪಕ್ಕವಾದ್ಯದಲ್ಲಿ ವಿದ್ವಾನ್ ಕೆ. ಕೆ. ಭಾನುಪ್ರಕಾಶ್ ಸಹಕಾರ ನೀಡಲಿದ್ದಾರೆ. ಸಂಜೆ 7.30 ಕ್ಕೆ ವಿಶೇಷ ನೃತ್ಯಪ್ರಸ್ತುತಿಯಲ್ಲಿ ಚೆನ್ನೈನ ಖ್ಯಾತ ಕಲಾವಿದೆ ವಿದುಷಿ ದಿವ್ಯಾ ವೇಣುಗೋಪಾಲ್ ಭರತನಾಟ್ಯ ಆಯೋಜನೆಗೊಂಡಿದೆ.

ವಿದ್ಯಾರ್ಥಿಗಳಿಂದ ವಾದ್ಯ ವೈಭವ:
ಜುಲೈ 7 ರ ಮಧ್ಯಾಹ್ನ 2 ಗಂಟೆಗೆ ನಟನ ತರಂಗಿಣಿ ಸಂಸ್ಥೆ ವಿದ್ಯಾರ್ಥಿಗಳಿಂದ ಗಾಯನ ಮತ್ತು ವಾದ್ಯ ನೆರವೇರಲಿದೆ. ಸಂಜೆ 6ಕ್ಕೆ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಜ್ಯೋತಿಷ್ಯ ಶಾಸ್ತ್ರಜ್ಞ, ಬೇಕಲ್ ಗೋಕುಲಂ ಗೋಶಾಲೆ ಸಂಸ್ಥಾಪಕ ವಿಷ್ಣು ಪ್ರಸಾದ ಹೆಬ್ಬಾರ್ ಮತ್ತು ನಾಗರತ್ನಾ ಹೆಬ್ಬಾರ್, ಬೆಂಗಳೂರಿನ ರಾಮಸೇವಾ ಮಂಡಳಿ ಕಾರ್ಯನಿರ್ವಾಹಕ ಅಭಿಜಿತ್ ವಾದಿರಾಜ್, ಉಡುಪಿಯ ಹಿರಿಯ ಸಂಗೀತ ತಜ್ಞ , ಸಂಯೋಜಕ, ರಂಜನಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಅರವಿಂದ ಹೆಬ್ಬಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಟನ ತರಂಗಿಣಿ ಸಂಸ್ಥಾಪಕ ಅಧ್ಯಕ್ಷೆ ಡಾ. ವೈ.ಜಿ. ಪರಿಮಳಾ, ಕಾರ್ಯ ದರ್ಶಿಗಳಾದ ವಿದ್ವಾನ್ ನಿಕ್ಷಿತ್ ಪುತ್ತೂರು ಮತ್ತು ವಿದುಷಿ ವೈ. ಜಿ. ಶ್ರೀ ಲತಾ ಉಪಸ್ಥಿತರಿರಲಿದ್ದಾರೆ.

ಸುಬ್ರಹ್ಮಣ್ಯ ಶಾಸ್ತ್ರಿಗೆ ಕಲಾಶ್ರಯ ಪ್ರಶಸ್ತಿ :
ಶಿವಮೊಗ್ಗದ ಹಿರಿಯ ಸಂಗೀತ ಸಂಘಟಕ, ಕಲಾ ಪ್ರೇಮಿ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ಇದೇ ವೇದಿಕೆಯಲ್ಲಿ ‘ಕಲಾಶ್ರಯ’ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ನಂತರ ನಡೆಯಲಿರುವ ದ್ವಂದ್ವ ಗಾಯನದಲ್ಲಿ ಲತಾಂಗಿ ಸಹೋದರಿಯರು ಎಂದೇ ಖ್ಯಾತರಾದ ಅರ್ಚನಾ ಮತ್ತು ಸಮನ್ವಿ
ಕರ್ನಾಟಕ ಶಾಸ್ತ್ರೀಯ ಸಂಗೀತ ಸುಧೆ ಹರಿಸಲಿದ್ದಾರೆ. ಪಕ್ಕವಾದ್ಯದಲ್ಲಿ ವಿದುಷಿ ಸಿ.ವಿ. ಶ್ರುತಿ ( ಪಿಟೀಲು), ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮ(ಮೃದಂಗ), ವಿದುಷಿ ಸುಕನ್ಯಾ ರಾಮಗೋಪಾಲ್ (ಘಟಂ) ಮತ್ತು ವಿದ್ವಾನ್ ಪಯ್ಯನೂರ್ ಗೋವಿಂದ ಪ್ರಸಾದ್ (ಮೋರ್ಸಿಂಗ್) ಸಾಥ್ ನೀಡಲಿರುವುದು ವಿಶೇಷ. ಕಲಾರಸಿಕರು ಭಾಗವಹಿಸುವಂತೆ ಸಂಗೀತ ಮತ್ತು ನೃತ್ಯ ‘ಉಭಯ ಕಲಾ ವಿದುಷಿ’ ವೈ.ಜಿ. ಶ್ರೀಲತಾ ವಿನಂತಿಸಿದ್ದಾರೆ.

ನಟನ ತರಂಗಿಣಿ ಸಂಸ್ಥೆ ಪರಿಚಯ:
ನಟನ ತರಂಗಿಣಿ ಸಂಗೀತ ಮತ್ತು ನೃತ್ಯ ಶಾಲೆಯನ್ನು 2004ರಲ್ಲಿ ಖ್ಯಾತ ವಿದುಷಿ ಡಾ. ವೈ.ಜಿ.ಪರಿಮಳ ಸ್ಥಾಪಿಸಿದರು. ಈ ಶಾಲೆಯು ಕಳೆದ 20 ವರ್ಷಗಳಿಂದ ಅನೇಕ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ, ವೀಣಾವಾದನ, ಕೀಬೋರ್ಡ್, , ಮೃದಂಗ ಹಾಗೂ ಭರತನಾಟ್ಯ ಕಲೆಯನ್ನು ಕರಗತ ಮಾಡಿಸಿದೆ. ಹಲವು ವಿದ್ಯಾರ್ಥಿಗಳು ವಿದ್ವಾಂಸರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!