ಹೊಸದಿಗಂತ ಡಿಜಿಟಲ್ ಡೆಸ್ಕ್:
ತುರ್ತು ಪರಿಸ್ಥಿತಿ ಹೇರಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ನಡೆಯನ್ನು ಶಿವಸೇನೆ (ಯುಬಿಟಿ) ಮುಖಂಡ ಮತ್ತು ರಾಜ್ಯಸಭಾ ಸಂಸದ ಸಂಜಯ್ ರಾವತ್ ಶನಿವಾರ ಸಮರ್ಥಿಸಿಕೊಂಡಿದ್ದಾರೆ.
1975ರ ತುರ್ತು ಪರಿಸ್ಥಿತಿಯ ನೆನಪಿಗಾಗಿ ಜೂನ್ 25 ಅನ್ನು ಸಂವಿಧಾನ್ ಹತ್ಯ ದಿವಸ್ ಎಂದು ಆಚರಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ರಾವತ್,’ಆ ಪರಿಸ್ಥಿತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರೆ, ಅವರು ಕೂಡ ತುರ್ತು ಪರಿಸ್ಥಿತಿಯನ್ನು ಜಾರಿಗೆ ತರುತ್ತಿದ್ದರು’ ಎಂದು ಹೇಳಿದ್ದಾರೆ.
ಬಿಜೆಪಿಗೆ ಮಾಡಲು ಬೇರೆ ಕೆಲಸವಿಲ್ಲ. ತುರ್ತು ಪರಿಸ್ಥಿತಿಗೆ 50 ವರ್ಷಗಳು ಕಳೆದಿವೆ. ಜನರು ತುರ್ತು ಪರಿಸ್ಥಿತಿಯನ್ನು ಮರೆತಿದ್ದಾರೆ. ಈ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಏಕೆ ಹೇರಲಾಯಿತು? ಎನ್ನುವುದನ್ನು ತಿಳಿದುಕೊಳ್ಳಬೇಕು. ಕೆಲವರು ಇನ್ನೂ ತುರ್ತು ಪರಿಸ್ಥಿತಿಯ ಹೆಸರು ಹೇಳಿಕೊಂಡು ಅರಾಜಕತೆಯನ್ನು ಹರಡಲು ಬಯಸುತ್ತಾರೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದರೆ, ಅವರೂ ತುರ್ತು ಪರಿಸ್ಥಿತಿ ಹೇರುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಅದು ರಾಷ್ಟ್ರೀಯ ಭದ್ರತೆಯ ವಿಷಯವಾಗಿತ್ತು. ಕೆಲವರು ಬಾಂಬ್‌ಗಳನ್ನು ತಯಾರಿಸುತ್ತಿದ್ದರು ಮತ್ತು ಅವುಗಳನ್ನು ವಿವಿಧ ಸ್ಥಳಗಳಲ್ಲಿ ಸ್ಫೋಟಿಸುತ್ತಿದ್ದರು. ಆ ಸಮಯದಲ್ಲಿ ಬಾಳಾಸಾಹೇಬ್ ಠಾಕ್ರೆ ತುರ್ತು ಪರಿಸ್ಥಿತಿಯನ್ನು ಬಹಿರಂಗವಾಗಿ ಬೆಂಬಲಿಸಿದ್ದರು ಮತ್ತು ಆರ್‌ಎಸ್‌ಎಸ್ ಕೂಡ ಅದನ್ನು ಬೆಂಬಲ ನೀಡಿತ್ತುಎಂದು ಅವರು ತಿಳಿಸಿದ್ದಾರೆ.
1975ರ ಜೂನ್ 25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಕಾರಣದಿಂದಾಗಿ ಜೂನ್ 25 ಅನ್ನು ಸಂವಿಧಾನ ಹತ್ಯಾ ದಿವಸ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಪ್ರತಿವರ್ಷ ಜೂನ್ 25ರಂದು ದೇಶಾದ್ಯಂತ ಸಂವಿಧಾನ ಹತ್ಯಾ ದಿವಸ ಎಂದು ಆಚರಿಸಲು ಕೇಂದ್ರ ಸರ್ಕಾರವು ತೀರ್ಮಾನಿಸಿದೆ.