ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪುತ್ರಿ ವಿರುದ್ಧ ಜನರನ್ನು ದಾರಿತಪ್ಪಿಸುವಂತಹ ಪೋಸ್ಟ್ ಮಾಡಿರುವ ಆರೋಪದಲ್ಲಿ ಯೂಟ್ಯೂಬರ್ ಧೃವ್ ರಥೀ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಗ್ಗೆ ತಪ್ಪಾದ ಪೋಸ್ಟ್‌ವೊಂದು ರಥೀ ಅವರ ಎಕ್ಸ್ ಖಾತೆಯಿಂದ ಪೋಸ್ಟ್ ಆಗಿತ್ತು.
ಧೃವ್ ರಥೀ ಅವರ ಪರೋಡಿ ಎಂಬ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಒಂದು ಪ್ರಕಟವಾಗಿತ್ತು. ಪೋಸ್ಟ್‌ನಲ್ಲಿ ಅಂಜಲಿ ಪರೀಕ್ಷೆಗೆ ಬರೆಯದೆಯೇ ಯುಪಿಎಸ್‌ಸಿ ಪರೀಕ್ಷೆ ಉತ್ತೀರ್ಣರಾಗಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದರು. ಅದೂ ಅಲ್ಲದೇ ಅಂಜಲಿಯವರ ಫೋಟೋವನ್ನು ಕೂಡ ಅವರ ಅನುಮತಿ ಇಲ್ಲದೇ ಪೋಸ್ಟ್ ಮಾಡಿದ್ದರು.
ಪರೀಕ್ಷೆ ಬರೆಯದೇ ನೀವು UPSC ಅನ್ನು ತೇರ್ಗಡೆ ಮಾಡುವ ಏಕೈಕ ದೇಶ ಭಾರತ. ಆದರೆ ಅದಕ್ಕಾಗಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಮಗಳಾಗಿ ಹುಟ್ಟಬೇಕು. ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಯಾವುದೇ ಪರೀಕ್ಷೆಯನ್ನು ನೀಡದೆ UPSC ತೇರ್ಗಡೆಯಾಗಿದ್ದಾರೆ, ಅವರು ವೃತ್ತಿಯಲ್ಲಿ ಮಾಡೆಲ್ ಆಗಿದ್ದಾರೆ. ಮೋದಿ ಸರ್ಕಾರ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಅಪಹಾಸ್ಯ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಕುರಿತು ಅಂಜಲಿಯ ಸೋದರ ಸಂಬಂಧಿ ನಮನ ಮಹೇಶ್ವರಿ ಅವರು ದೂರು ದಾಖಲಿಸಿದ್ದಾರೆ. 2019 ರಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ ಅಂಜಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿದ್ದಾಳೆ ಎಂದು ನಮನ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ರಾಥೀ ಅವರ ಟ್ವೀಟ್‌ಗಳು ಅಂಜಲಿಯನ್ನು ಭಾರತದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಅಪಖ್ಯಾತಿಗೊಳಿಸಿವೆ ಎಂದು ಅವರು ದೂರಿದ್ದಾರೆ.ಈ ಪ್ರಕರಣದ ತನಿಖೆಯ ಭಾಗವಾಗಿ ಪೊಲೀಸರು ಶೀಘ್ರದಲ್ಲೇ ಧ್ರುವ ರಥಿಯನ್ನು ವಿಚಾರಣೆಗೆ ಕರೆಸುವ ಸಾಧ್ಯತೆಯಿದೆ.