ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಡಾನೆಯನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಆನೆ ನಿಗ್ರಹ ಪಡೆಯ ಸದಸ್ಯನನ್ನೇ ಆನೆ ಬಲಿ ತೆಗೆದುಕೊಂಡಿರುವ ಘಟನೆ ಮೂಡಿಗೆರೆ ತಾಲ್ಲೂಕು ಬೈರಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಮೂಡಿಗೆರೆ ತಾಲ್ಲೂಕು ಗೌಡಹಳ್ಳಿ ನಿವಾಸಿ ಕಾರ್ತಿಕ್ ಗೌಡ (೨೬) ಮೃತ ದುರ್ದೈವಿಯಾಗಿದ್ದಾರೆ. ಆನೆಗಳ ಹಾವಳಿ ನಿಯಂತ್ರಿಸಲೆಂದೇ ರಚಿಸಲಾಗಿರುವ ಆನೆ ನಿಗ್ರಹ ಪಡೆಗೆ ಅರಣ್ಯ ಇಲಾಖೆ ಅವರನ್ನು ನೇಮಿಸಿಕೊಂಡಿತ್ತು.
ಬೈರಾಪುರ ಗ್ರಾಮದಲ್ಲಿ ಬುಧವಾರ ಬೆಳಗಿನಿಂದ ಆನೆಗಳು ದಾಳಿ ಇಟ್ಟಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಆನೆ ನಿಗ್ರಹ ಪಡೆಯು ಅವುಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಕೈಗೊಂಡಿತ್ತು. ಮಧ್ಯಾಹ್ನದ ವೇಳೆಗೆ ಗುಂಪಿನಲ್ಲಿದ್ದ ಆನೆಯೊಂದು ಅರಣ್ಯ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ತೀವ್ರ ಗಾಯಗೊಂಡ ಕಾರ್ತಿಕ್ ಗೌಡ ಸಾವಪ್ಪಿದ್ದಾರೆ. ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇವಲ ೨೦ ದಿನಗಳ ಹಿಂದಷ್ಟೇ ಆಲ್ದೂರು ಸಮೀಪ ಒಂಟಿ ಸಲಗ ದಾಳಿ ಮಾಡಿ ಮೀನಾ ಎಂಬ ಕಾರ್ಮಿಕ ಮಹಿಳೆಯೊಬ್ಬರನ್ನು ಕೊಂದಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ದುರುಂತ ಸಂಭವಿಸಿದ್ದು, ಮಲೆನಾಡನ್ನು ತಲ್ಲಣಗೊಳಿಸಿದೆ.
ಒಂದೂವರೆ ತಿಂಗಳ ಹಿಂದೆ ಆಲ್ದೂರಿನ ಕುಂದೂರು ಬಳಿ ಚಿನ್ನಿ ಎಂಬುವವರನ್ನು ಆನೆ ಬಲಿ ಪಡೆದಿತ್ತು. ಇದೀಗ ಕಾರ್ತಿಕ್ ಗೌಡನನ್ನು ಆನೆ ಕೊಂದಿದೆ. ಎರಡೇ ತಿಂಗಳಲ್ಲಿ ಮೂರು ಮಂದಿ ಆನೆ ದಾಳಿಗೆ ತುತ್ತಾಗಿ ಜೀವ ಕಳೆದುಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.