ಹೊಸದಿಗಂತ ಡಿಜಿಟಲ್ ಡೆಸ್ಕ್:
“ಇಂದಿನ ಮಹಿಳೆಯರು ಸಮಾಜದ ಹಳೆಯ ಕಟ್ಟುಪಾಡುಗಳನ್ನು ಮುರಿದು ಸಾಧನೆಯ ಶಿಖರ ಏರುತ್ತಿದ್ದಾರೆ. ಪ್ರತಿಯೊಬ್ಬ ಮಹಿಳೆಯೂ ಸ್ವಾಭಿಮಾನದ ಜೀವನವನ್ನು ಕಂಡುಕೊಂಡಿರುವುದು ಆಶಾದಾಯಕ ಬೆಳವಣಿಗೆ,” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪಿರಿಯಾಪಟ್ಟಣದ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಮಕ್ಕಳೇ ನಮ್ಮ ನಾಳೆಯ ಭವಿಷ್ಯ. ಮನೆಯಲ್ಲಿ ಹೆಣ್ಣುಮಕ್ಕಳಿಗೆ ‘ಸುಮ್ಮನಿರು’ ಎಂದು ಬಾಯಿ ಮುಚ್ಚಿಸುವ ಬದಲು, ಸಮಾಜದ ಅನ್ಯಾಯಗಳ ವಿರುದ್ಧ ‘ಮಾತನಾಡು’ ಎಂದು ಧೈರ್ಯ ತುಂಬಬೇಕು. ಹೆಣ್ಣುಮಕ್ಕಳಿಗೆ ಕೇವಲ ಪದವಿ ಕೊಡಿಸಿದರೆ ಸಾಲದು, ಅವರು ಸ್ವಂತ ಕಾಲ ಮೇಲೆ ನಿಂತು ಬದುಕುವಂತೆ ಸಿದ್ಧಪಡಿಸಬೇಕು. ಅದುವೇ ನಿಜವಾದ ಸಬಲೀಕರಣ. ಬೇರೆಯವರಿಗೆ ಗೌರವ ಕೊಡುವುದನ್ನು ಕಲಿಸುವುದರ ಜೊತೆಗೆ, ತನಗೂ ತಾನು ಗೌರವ ಕೊಟ್ಟುಕೊಳ್ಳುವುದನ್ನು ಪ್ರತಿಯೊಬ್ಬ ಹೆಣ್ಣುಮಗಳು ಕಲಿಯಬೇಕು. ಪೋಷಕರು ಮಕ್ಕಳಿಗೆ ಸ್ವಾಭಿಮಾನದ ಪಾಠವನ್ನು ಪ್ರಮುಖವಾಗಿ ಬೋಧಿಸಬೇಕು.” ಎಂದು ತಿಳಿಸಿದರು.
ಈ ಸಮಾರಂಭದಲ್ಲಿ ತಾಲೂಕಿನ ನೂರಾರು ಮಹಿಳೆಯರು ಪಾಲ್ಗೊಂಡು ಸಚಿವರ ಪ್ರೇರಣಾದಾಯಕ ಮಾತುಗಳಿಗೆ ಸಾಕ್ಷಿಯಾದರು.



