ಆಪ್​ಗೆ 25 ಕೋಟಿ ಕೊಡುವಂತೆ ಉದ್ಯಮಿಗೆ ಕೆ.ಕವಿತಾ ಬೆದರಿಕೆ: ಸಿಬಿಐ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ (Delhi Liquor Scam Case) ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಬಿಆರ್‌ಎಸ್ ನಾಯಕಿ ಕೆ.ಕವಿತಾ (K Kavitha) ವಿರುದ್ಧ ಕೋರ್ಟ್​ನಲ್ಲಿ ಸಿಬಿಐ ಗಂಭೀರ ಆರೋಪವನ್ನು ಮಾಡಿದೆ.

ಕವಿತಾ ಅವರು ಅರಬಿಂದೋ ಫಾರ್ಮಾ ಪ್ರವರ್ತಕ ಶರತ್ ಚಂದ್ರ ರೆಡ್ಡಿಗೆ ಅಬಕಾರಿ ನೀತಿಯ ಅಡಿಯಲ್ಲಿ ಎಎಪಿಗೆ 25 ಕೋಟಿ ರೂ.ಗಳನ್ನು ನೀಡುವಂತೆ ಬೆದರಿಕೆ ಹಾಕಿದ್ದರು ಎಂದು ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ.

ಹೊಸ ನೀತಿಯಡಿ ಅರಬಿಂದೋ ಫಾರ್ಮಾ ಸಂಸ್ಥೆಗೆ ಮಂಜೂರು ಮಾಡಿರುವ ಐದು ಚಿಲ್ಲರೆ ವಲಯಗಳಿಗೆ ಸಂಬಂಧಿಸಿ ಹಣ ನೀಡುವಂತೆ ಆಕೆ ಒತ್ತಾಯಿಸಿದ್ದಳು. ಹಣ ಪಾವತಿ ಮಾಡದಿದ್ದಲ್ಲಿ ಅಬಕಾರಿ ನೀತಿಯಡಿ (Delhi excise policy) ತೆಲಂಗಾಣ ಮತ್ತು ದೆಹಲಿಯಲ್ಲಿ ಸಂಸ್ಥೆಯ ವ್ಯವಹಾರಕ್ಕೆ ಹಾನಿಯಾಗುತ್ತದೆ ಎಂದು ಕವಿತಾ ರೆಡ್ಡಿ ಬೆದರಿಸಿದ್ದರು ಎಂದು ಸಿಬಿಐ ಆರೋಪಿಸಿದೆ.

ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಪಿಎಂಎಲ್‌ಎ ಪ್ರಕರಣದಡಿ ಆರೋಪಿಯಾಗಿದ್ದ ರೆಡ್ಡಿ, ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿದ್ದರು. ಅವರ ವಿರುದ್ಧ ಸಿಬಿಐ ಇನ್ನೂ ಆರೋಪ ಪಟ್ಟಿ ಸಲ್ಲಿಸಿಲ್ಲ. ಕವಿತಾ ಅವರನ್ನು ಕಸ್ಟಡಿ ವಿಚಾರಣೆಗೆ ಒಳಪಡಿಸಲು ಕೋರಿದ ಸಿಬಿಐ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರನ್ನು ಕೋರಿದೆ. ಕವಿತಾ ಅವರ ಒತ್ತಾಯ ಮತ್ತು ಭರವಸೆಯಿಂದಲೇ ರೆಡ್ಡಿ ರಾಷ್ಟ್ರ ರಾಜಧಾನಿಯಲ್ಲಿ ಮದ್ಯದ ವ್ಯವಹಾರದಲ್ಲಿ ಭಾಗವಹಿಸಿದ್ದಾರೆ ಎಂದು ಸಿಬಿಐ ದೂರಿದೆ.

“ಮದ್ಯದ ವ್ಯಾಪಾರವನ್ನು ಪಡೆಯಲು ಸಗಟು ವ್ಯಾಪಾರಕ್ಕೆ 25 ಕೋಟಿ ರೂಪಾಯಿ ಮತ್ತು ಪ್ರತಿ ಚಿಲ್ಲರೆ ವಲಯಕ್ಕೆ 5 ಕೋಟಿ ರೂಪಾಯಿಗಳ ಮುಂಗಡ ಹಣದ ಪಾವತಿಯನ್ನು ಆಮ್ ಆದ್ಮಿ ಪಕ್ಷಕ್ಕೆ ಮಾಡಲಾಗುವುದು ಎಂದು ಕವಿತಾ, ಶರತ್ ಚಂದ್ರ ರೆಡ್ಡಿಗೆ ತಿಳಿಸಿದ್ದರು. ಆಕೆಯ ಸಹಚರರಾದ ಅರುಣ್ ಆರ್. ಪಿಳ್ಳೈ ಮತ್ತು ಅಭಿಷೇಕ್ ಬೋಯಿನ್ಪಲ್ಲಿ ಅವರಿಗೆ ಇದನ್ನು ಪಾವತಿಸಲಾಗಿದೆ. ಅವರು ಅರವಿಂದ್ ಕೇಜ್ರಿವಾಲ್ ಅವರ ಪ್ರತಿನಿಧಿಯಾಗಿದ್ದ ವಿಜಯ್ ನಾಯರ್ ಅವರೊಂದಿಗೆ ಸಮನ್ವಯ ಸಾಧಿಸಿದ್ದರು,” ಎಂದು ಸಿಬಿಐ ಆರೋಪಿಸಿದೆ.

ಇದಕ್ಕೂ ಮುನ್ನ ದೆಹಲಿ ನ್ಯಾಯಾಲಯವು ಕೆ. ಕವಿತಾ ಅವರನ್ನು ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಏಪ್ರಿಲ್ 15ರವರೆಗೆ ಸಿಬಿಐ ಕಸ್ಟಡಿಗೆ ಕಳುಹಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!