ಹೊಸದಿಗಂತ ವರದಿ, ಆಲೂರು:
ಆಲೂರು ಗಡಿ ಭಾಗದ ಬಿಕ್ಕೋಡು ಹೋಬಳಿಗೆ ಸೇರಿದ ಅಂಕಿಹಳ್ಳಿಪೇಟೆ ಗ್ರಾಮದಲ್ಲಿ ಗುರುವಾರ ಮಂಜು ಮುಸುಕುವ ಮುನ್ನವೆ ದಿಢೀರನೆ ಕಾಡಾನೆಯೊಂದು ಗ್ರಾಮದೊಳಗೆ ಪ್ರತ್ಯಕ್ಷವಾಗಿದ್ದರಿಂದ ಜನಸಾಮಾನ್ಯರಲ್ಲಿ ಆತಂಕ ಮೂಡಿದ್ದು, ಕಾರ್ಮಿಕರು ಕಾಫಿ ಹಣ್ಣು ಕೊಯ್ಲು ಮಾಡಲು ತೋಟಕ್ಕೆ ಹೋಗದೆ ಭಯಭೀತರಾಗಿ ಮನೆಯಲ್ಲಿ ಉಳಿದಿದ್ದಾರೆ.
ಅಂಕಿಹಳ್ಳಿಪೇಟೆ ಗ್ರಾಮದ ಸುತ್ತಲೂ ಕಾಫಿ ತೋಟಗಳಿವೆ. ಬೆಳಗಿನಜಾವ ಸುಮಾರು ಮೂರು ಗಂಟೆ ಸಮಯದಲ್ಲಿ ಎರಡು ಕಾಡಾನೆಗಳು ಗೀಳಿಡುತ್ತಾ ತೋಟದಿಂದ ಹೊರಬಂದು ಗ್ರಾಮದೊಳಗೆ ಓಡಾಡಿ ಪುನ: ತೋಟದೊಳಗೆ ಹೋಗಿದ್ದವು.
ನಂತರ ಸುಮಾರು ೮.೩೦ ವೇಳೆಗೆ ಕಾಫಿ ಹಣ್ಣು ಕೊಯ್ಲು ಮಾಡಲು ಗ್ರಾಮದ ಸುಮಾರು ನೂರಾರು ಕಾರ್ಮಿಕರು ಶ್ರೀರಾಮ ದೇವಸ್ಥಾನ ಬಳಿ ಸೇರಿಕೊಂಡಿದ್ದರು. ಅಷ್ಟರಲ್ಲಿ ದೇವಸ್ಥಾನದ ಬಳಿ ಕೇವಲ ೧೫ ಅಡಿ ದೂರದಲ್ಲಿ ಕಾಡಾನೆಯೊಂದು ನಿಂತಿದ್ದನ್ನು ಕೆಲವರು ಗಮನಿಸಿದರು.
ಸ್ಥಳೀಯರು ನೋಡುತ್ತಿದ್ದಂತೆಯೆ ಬೇಲಿ ದಾಟಿಕೊಂಡು ದೇವಸ್ಥಾನದ ಮುಂಭಾಗದ ರಸ್ತೆಗೆ ಬಂದಾಗ ನೆರೆದಿದ್ದವರು ಭಯಭೀತರಾಗಿ ಚೆಲ್ಲಾಪಿಲ್ಲಿಯಾಗಿ ಓಡಿದರು. ರಸ್ತೆ ಬದಿಯಲ್ಲಿದ್ದ ಎ. ಕೆ. ಪೋಷಿತಕುಮಾರ್ ಮನೆ ಗೇಟ್ ಬಳಿ ಹೋದ ಆನೆ, ಅತ್ತಿಂದಿತ್ತ ನೋಡುತ್ತಾ ಅರ್ಧ ಗಂಟೆ ನಂತರ ಗೀಳಿಡುತ್ತಾ ಲಕ್ಕುಂದ ದಾರಿಯಲ್ಲಿ ಕೆಲ ದೂರ ಹೋಗಿ ಕಾಫಿ ತೋಟದೊಳಕ್ಕೆ ಹೋಯಿತು. ಭಯಭೀತರಾದ ಕಾರ್ಮಿಕರು ಹಣ್ಣು ಕೊಯ್ಲು ಮಾಡಲು ಹೋಗದೆ ಮನೆಯಲ್ಲಿ ಉಳಿದರು.
ಕೆಲ ಸಮಯದ ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಆನೆ ಚಲನವನ್ನು ಗಮನಿಸಿ ಮನೆಯಿಂದ ಯಾರು ಹೊರ ಬರಬಾರದು ಎಂದು ಮೈಕ್ ಮೂಲಕ ಪ್ರಚಾರಪಡಿಸಲು ಮುಂದಾದರು.
ಒAದು ವಾರದಿಂದ ಸುಮಾರು ೨೫ ಕಾಡಾನೆಗಳು ಸುತ್ತಮುತ್ತಲ ಆರೇಳು ಕಿ.ಮೀ. ವ್ಯಾಪ್ತಿಯ ಕಾಫಿ ತೋಟದಲ್ಲಿ ಬೀಡುಬಿಟ್ಟಿವೆ. ಜ್ಞಾನೇಶ್ ರವರ ಕಾಫಿ ತೋಟದಲ್ಲಿ ಬೆಳಗ್ಗೆ ಸುಮಾರು ೨೨ ಕಾಡಾನೆಗಳಿರುವುದನ್ನು ಮಾಲೀಕರು ಗಮನಿಸಿದ್ದಾರೆ.
ಇಂದು ಬೆಳಗಿನ ಜಾವ ಮೂರು ಗಂಟೆಯಲ್ಲಿ ಎರಡು ಕಾಡಾನೆಗಳು ಗ್ರಾಮದೊಳಗೆ ಪ್ರತ್ಯಕ್ಷವಾಗಿ ಜಯಪ್ಪಶೆಟ್ಟಿ ಮನೆ ಬಳಿ ಕಾಫಿ ತೋಟಕ್ಕೆ ಹೋಗಿವೆ. ೮.೩೦ ರಲ್ಲಿ ಪ್ರತ್ಯಕ್ಷವಾದ ಆನೆ ಎಡ ತೊಡೆ ಮೇಲೆ ಸುಮಾರು ಒಂದು ಅಡಿ ಗಾತ್ರದ ಗಂಟಾಗಿದೆ. ಬಾಲ ಅರ್ಧಕ್ಕೆ ತುಂಡಾಗಿರುವುದರಿoದ ನೋವಿನಿಂದ ನರಳುತ್ತಿರುವಂತೆ ಬಾಸವಾಗುತ್ತಿತ್ತು. ಸಂಜೆಯಿoದ ಬೆಳಗಾಗುವವರೆಗೂ ಭಯದಿಂದಲೆ ರಾತ್ರಿ ಕಳೆಯುತ್ತಿದ್ದೇವೆ. ಇಂದು ಬೆಳಗ್ಗೆ ಕಾಡಾನೆ ಪ್ರತ್ಯಕ್ಷವಾಗಿರುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಸಾಧ್ಯವಾದಷ್ಟು ಜನಸಾಮಾನ್ಯರ ಸುರಕ್ಷತೆ ಬಗ್ಗೆ ಗಮನಹರಿಸಬೇಕೆಂದು ಸ್ಥಳೀಯ ನಿವಾಸಿ ಎ. ಪಿ. ದರ್ಶನ್ ಮನವಿ ಮಾಡಿದ್ದಾರೆ.