ಹೊಸದಿಗಂತ ವರದಿ,ಮಡಿಕೇರಿ:
ಕಡವೆಯನ್ನು ಬೇಟೆಯಾಡಿ ಮಾಂಸ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಂಪಾಜೆ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಲು ಸಹಿತ ಬಂಧಿಸಿದ್ದಾರೆ.
ದಬ್ಬಡ್ಕ ಗ್ರಾಮ ನಿವಾಸಿಗಳಾದ ಕೃಷ್ಣಪ್ಪ(47) ಹಾಗೂ ಪುರುಷೋತ್ತಮ ಕೆ.ಎಸ್.(48) ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 100 ಕೆ.ಜಿ ಕಡವೆ ಮಾಂಸ, ಕತ್ತಿ, ಟಾರ್ಪಲ್ ಸೇರಿದಂತೆ ಮತ್ತಿತ್ತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಇಬ್ಬರು ಆರೋಪಿಗಳ ವಿರುದ್ದ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಆರೋಪಿಗಳು ಸಂಪಾಜೆ ವಲಯದ ದಬ್ಬಡ್ಕ ಅರಣ್ಯದಲ್ಲಿ ಕಡವೆ ಬೇಟೆಯಾಡಿರುವುದಾಗಿ ಹೇಳಲಾಗಿದೆ.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ಹಾಗೂ ಸಂಪಾಜೆ ವಲಯ ಅರಣ್ಯಾಧಿಕಾರಿ ಮಧುಸೂದನ್ ಎಂ.ಕೆ. ಮಾರ್ಗದರ್ಶನದಲ್ಲಿ ಅರಣ್ಯ ರಕ್ಷಕರಾದ ಕಾರ್ತಿಕ್, ವೀಕ್ಷಕರಾದ ಕೂಸಪ್ಪ, ಮನೋಜ್ ಕುಮಾರ್, ಕಾರ್ಯಾಚರಣೆ ನಡೆಸಿದ್ದಾರೆ.