ಕಾವೇರಿ ನದಿ ಉತ್ಸವ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಕರೆ

ಹೊಸದಿಗಂತ ವರದಿ,ಮಡಿಕೇರಿ:

ಅ.21 ರಂದು ನಡೆಯಲಿರುವ ಕಾವೇರಿ ನದಿ ಉತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಇಲಾಖೆಗಳು ಅಗತ್ಯವಿರುವ ಸಹಕಾರ ನೀಡುವ ಮೂಲಕ ಸಮಾರಂಭವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಿದ್ದತೆ ಸಭೆಯಲ್ಲಿ ಮಾತನಾಡಿದ ಅವರು, ನದಿ ಸಂರಕ್ಷಣೆ ಸಂಬಂಧ ಇದೇ ಮೊದಲ ಬಾರಿಗೆ ನಡೆಯುವ ಕಾವೇರಿ ನದಿ ಉತ್ಸವ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ಉಸ್ತುವಾರಿ ವಹಿಸಿರುವ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಹೆಚ್.ಎಸ್ ಮೋಹನ್ ಕುಮಾರ್, ನದಿ ಉತ್ಸವದ ಬಗ್ಗೆ ಸಭೆಗೆ ಮಾಹಿತಿ ಒದಗಿಸಿದರು. ತಲಕಾವೇರಿಯಲ್ಲಿ ಕಾವೇರಿ ನದಿ ಉತ್ಸವಕ್ಕೆ ಅ.21 ರಂದು ಬೆಳಗ್ಗೆ 8.30 ಕ್ಕೆ ಚಾಲನೆ ದೊರೆಯಲಿದ್ದು, ನಂತರ 11 ಗಂಟೆಗೆ ಭಾಗಮಂಡಲದ ಸಂಗಮದಲ್ಲಿ ನದಿಗೆ ಮಹಾ ಆರತಿ ಕಾರ್ಯಕ್ರಮ ನಡೆಯಲಿದೆ. ಸಂಜೆ 3 ಗಂಟೆಗೆ ಕುಶಾಲನಗರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ರಾಜ್ಯ ಜಲಸಂಪನ್ಮೂಲ ಸಚಿವರು, ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರುಗಳು ಮತ್ತು ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ನದಿ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರಿಗೆ ಅರಿವು, ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಕಾರ್ಯಕ್ರಮ ಯಶಸ್ವಿಗೆ ಸಂಬಂಧಿಸಿದ ಇಲಾಖೆಗಳ ಅಗತ್ಯ ಸಹಕಾರ ಬಯಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕಾವೇರಿ ರಿವರ್ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಎನ್ ಚಂದ್ರಮೋಹನ್ ಮಾತನಾಡಿ, ಕಳೆದ 15 ವರ್ಷಗಳಿಂದ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಾವೇರಿ ನದಿ ಸ್ವಚ್ಛತೆ, ಸಂರಕ್ಷಣೆ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಗರಿಕರಿಗೆ ನದಿ ಪರಿಸರ ಸಂರಕ್ಷಣೆ ಬಗ್ಗೆ ಅರಿವು, ಜಾಗೃತಿ ಮೂಡಿಸುವ ಕೆಲಸ ನಡೆದಿದೆ. ಇದೀಗ ಸರ್ಕಾರದ ಮೂಲಕ ಅಕ್ಟೋಬರ್ 21 ರಂದು ಮೊದಲ ಬಾರಿಗೆ ಕಾವೇರಿ ನದಿ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲು ಸರ್ಕಾರಕ್ಕೆ ಸಲ್ಲಿಸಿದ ಮನವಿ ಮೇರೆಗೆ ಒಂದು ದಿನದ ಕಾರ್ಯಕ್ರಮ ನಡೆಯುತ್ತಿದ್ದು, ಇದೇ ಸಂದರ್ಭ ತಲಕಾವೇರಿಯಿಂದ ಪೂಂಪ್‍ಹಾರ್ ತನಕ ನದಿ ಸಂರಕ್ಷಣೆಯ ಅಭಿಯಾನದೊಂದಿಗೆ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಸ್ವಾಮಿಜಿಗಳು, ಸಾಧು ಸಂತರ ತಂಡದ ಯಾತ್ರೆಗೆ ತಲಕಾವೇರಿಯಲ್ಲಿ ಚಾಲನೆ ದೊರೆಯಲಿದೆ ಎಂದರು.
ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ, ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನ ಎಂ.ಷೇಕ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ಆರೋಗ್ಯಧಿಕಾರಿ ಗೋಪಿನಾಥ್, ಬಿಸಿಎಂ ಅಧಿಕಾರಿ ಎನ್.ಎನ್ ಮಂಜುನಾಥ್, ಲೋಕೋಪಯೋಗಿ ಕಾರ್ಯಪಾಲಕ ಇಂಜಿನಿಯರ್ ನಾಗರಾಜು, ಹಾರಂಗಿ ಅಣೆಕಟ್ಟು ಯೋಜನೆಯ ಕಾರ್ಯಪಾಲಕ ಇಂಜಿನಿಯರ್ ಐ.ಕೆ ಪುಟ್ಟಸ್ವಾಮಿ, ಸಹಾಯಕ ಇಂಜಿನಿಯರ್ ಸಿದ್ದರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಶಿಕ್ಷಣ ಇಲಾಖೆಯ ಸದಾಶಿವ ಪಲ್ಲೇದ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಪ್ರಮೋದ್, ಜಿಲ್ಲಾ ಪಂಚಾಯತ್ ಇಂಜಿನಿಯರ್ ಶ್ರೀಕಂಠಯ್ಯ, ಸೆಸ್ಕ್ ಅಧಿಕಾರಿ ವಿನಯ್ ಕುಮಾರ್, ತಹಶೀಲ್ದಾರ್ ಮಹೇಶ್, ಕಾವೇರಿ ರಿವರ್ ಸೇವಾ ಟ್ರಸ್ಟ್ ಪ್ರಮುಖರಾದ ಕೆ.ಜಿ ಮನು, ಡಿ.ಆರ್ ಸೋಮಶೇಖರ್ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!