ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ನಾಗುರಿ ಪರಿಸರದಲ್ಲಿ ಕುಕ್ಕರ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ʼಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ʼ ಹೆಸರಿನ ಸಂಘಟನೆಯೊಂದು ಕೃತ್ಯದ ಹೊಣೆಯನ್ನು ಹೊತ್ತುಕೊಂಡಿದೆ.
ಸಾಮಾಜಿಕ ಜಾಲತಾಣದಲ್ಲಿ Islamic Resistance Council ಸಂಘಟನೆ ಅರೆಬಿಕ್ ಭಾಷೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ. ನಮ್ಮ ದಾಳಿ ಕದ್ರಿ ದೇವಸ್ಥಾನ ಆಗಿತ್ತು. ಆದರೆ ಉದ್ದೇಶಿತ ಗುರಿಯನ್ನು ತಲುಪುವ ಮೊದಲೇ ಬಾಂಬ್ ಸ್ಫೋಟಗೊಂಡಿದೆ ಸಂಘಟನೆ ಹೇಳಿಕೊಂಡಿದೆ.
ಶಂಕಿತ ಉಗ್ರ ಶಾರೀಕ್ ನಮ್ಮ ಸಹೋದರ. ಮಂಗಳೂರಿನ ಕದ್ರಿ ದೇವಾಲಯದ ಮೇಲೆ ದಾಳಿಗೆ ಯತ್ನಿಸಲಾಗಿತ್ತು. ಮಂಗಳೂರು ಕೇಸರಿ ಭಯೋತ್ಪಾದಕರ ಭದ್ರಕೋಟೆಯಾಗಿದೆ. ಈ ಕಾರ್ಯಾಚರಣೆಯ ನಮ್ಮ ಉದ್ದೇಶ ಈಡೇರದಿದ್ದರೂ ರಾಜ್ಯ, ಕೇಂದ್ರ ಗುಪ್ತಚರ ಸಂಸ್ಥೆಗಳ ಕಣ್ತಪ್ಪಿಸಿ ದಾಳಿಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಉಗ್ರರು ಎಚ್ಚರಿಕೆ ನೀಡಿದ್ದಾರೆ.
ನ.23ರಂದು ಪ್ರಕಟಿಸಲಾದ ಅರೆಬಿಕ್ ಭಾಷೆಯಲ್ಲಿರುವ “Majlis Almuqawamat Al’islamia” ಪೋಸ್ಟ್ ಜೊತೆ ಬಾಂಬ್ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್ ಎರಡು ಹಳೆಯ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ.
ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಬೆದರಿಕೆ ಹಾಕಲಾಗಿದೆ. ‘ನಿಮ್ಮ ಸಂತೋಷವು ಅಲ್ಪಕಾಲಿಕವಾಗಿರುತ್ತದೆ ಮತ್ತು ನಿಮ್ಮ ದಬ್ಬಾಳಿಕೆಯ ಫಲವನ್ನು ನೀವು ಅನುಭವಿಸುತ್ತೀರಿ’ ಎಂದು ಹೇಳಿದೆ.ರಾಜ್ಯದಲ್ಲಿ ಗುಂಪು ಹತ್ಯೆ, ದಬ್ಬಾಳಿಕೆಯ ಕಾನೂನುಗಳು ಮತ್ತು ಶಾಸನಗಳು ಮತ್ತು ಧರ್ಮದಲ್ಲಿ ಹಸ್ತಕ್ಷೇಪದ ನಡೆಯುವ ಮೂಲಕ ನಮ್ಮ ಮೇಲೆ ಯುದ್ಧ ಸಾರಲಾಗಿದೆ. ಈ ಯುದ್ಧಕ್ಕೆ ಪ್ರತಿಯಾಗಿ ದಾಳಿ ನಡೆಸಲಾಗುತ್ತಿದೆ ಎಂದು ಸಂಘಟನೆ ಹೇಳಿದೆ.
ಈ ಮೂಲಕ ತನಿಖೆ ನಡೆಸುತ್ತಿರುವ ಪೊಲೀಸರಿಗೆ ದಿನದಿಂದ ದಿನಕ್ಕೆ ಸ್ಪೋಟಕ ಮಾಹಿತಿ ಸಿಗುತ್ತಿದೆ.