ಹೊಸದಿಗಂತ ಡಿಜಿಟಲ್ ಡೆಸ್ಕ್:
ನವದೆಹಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂದೀಪ್ ದೀಕ್ಷಿತ್ ಅವರು ಬಿಜೆಪಿಯಿಂದ ಹಣ ಪಡೆದ ಕಾಂಗ್ರೆಸ್ ನಾಯಕನ ವಿರುದ್ಧದ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅತಿಶಿ ಮತ್ತು ಎಎಪಿ ಸಂಸದ ಸಂಜಯ್ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾನನಷ್ಟ ಮೊಕದ್ದಮೆಯ ಮೂಲಕ 10 ಕೋಟಿಗೆ ಬೇಡಿಕೆಯಿಡುವುದಾಗಿ ಮತ್ತು ಅದನ್ನು ಯಮುನಾ ಶುದ್ಧೀಕರಣಕ್ಕೆ ಮತ್ತು ದೆಹಲಿಯಲ್ಲಿನ ಮಾಲಿನ್ಯದ ಸಮಸ್ಯೆಯನ್ನು ಪರಿಹರಿಸಲು ಬಳಸುವುದಾಗಿ ಹೇಳಿದ್ದಾರೆ.
“5-6 ದಿನಗಳ ಹಿಂದೆ, ದೆಹಲಿ ಸಿಎಂ ಅತಿಶಿ ನಾನು ಬಿಜೆಪಿಯಿಂದ ದೊಡ್ಡ ಮೊತ್ತದ ಹಣವನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದರು … ಕಳೆದ 10-12 ವರ್ಷಗಳಿಂದ ಅವರು, ನನ್ನನ್ನು ಮತ್ತು ನನ್ನ ಕುಟುಂಬವನ್ನು ಗುರಿಯಾಗಿಸಿಕೊಂಡಿದ್ದಾರೆ. ಅತಿಶಿ ಮತ್ತು ಎಎಪಿ ಸಂಸದ ಸಂಜಯ್ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ನಾನು ಪ್ರತಿಜ್ಞೆ ಮಾಡುತ್ತೇನೆ” ಎಂದು ಕಿಡಿಕಾರಿದ್ದಾರೆ.