ಹಾವೇರಿಯಲ್ಲಿ ಕೈ ಗೆಲುವು ಖಚಿತ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ

ಹೊಸದಿಗಂತ ವರದಿ,ಹಾವೇರಿ:

ಜಿಲ್ಲೆಯಲ್ಲಿ ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಗೆಲ್ಲಲೇಬೇಕೆಂದು ನನಗೆ ಉಸ್ತುವಾರಿ ನೀಡಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಕರೆಯಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾರಿ ಗೆಲ್ಲಿಸಬೇಕೆಂದೇ ನಮ್ಮನ್ನ ಉಸ್ತುವಾರಿ ಹಾಕಿದಾರೆ, ಈ ಭಾರಿ ಗೆದ್ದು ತೋರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಎಚ್.ಕೆ. ಪಾಟೀಲ, ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ,ಸರ್ವಾನುಮತದ ಒಗ್ಗಟ್ಟಿನ ಮಂತ್ರ ನಮ್ಮನ್ನು ಗೆಲ್ಲಿಸುತ್ತದೆ. ರಾಜ್ಯದಲ್ಲಿ ೨೫ಕ್ಕೂ ಹೆಚ್ಚು ಸಂಸದರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗುತ್ತಾರೆ ಎಂದರು.

ಕಾವೇರಿ, ಕೃಷ್ಣ ಹಾಗೂ ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಕೇಂದ್ರ ಅನ್ಯಾಯ ಮಾಡಿದೆ. ಇದೇ ಕಾರಣಕ್ಕೆ ಈ ಭಾರಿ ಬಿಜೆಪಿಗೆ ಜನರು ಶಾಸ್ತಿ ಮಾಡಿದ್ದು, ಇದರಿಂದ ಅವರು ಭ್ರಮನಿರಸಗೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ನಮ್ಮ ಸರ್ಕಾರದ ಘೋಷಣೆಯಂತೆ ಮೂರು ತಿಂಗಳಲ್ಲಿ ನಾಲ್ಕು ಗ್ಯಾರಂಟಿ ಪೂರೈಸಿದ್ದೇವೆ, ಪ್ರತಿದಿನ ಜನರ ಕೆಲಸ ಮಾಡುತ್ತಿದ್ದೇವೆ, ನುಡಿದಂತೆ ನಮ್ಮ ಸರ್ಕಾರ ನಡೆದುಕೊಂಡಿದೆ. ನಮ್ಮ ಗ್ಯಾರಂಟಿಗಳ ಬಗ್ಗೆ ಬಿಜೆಪಿ ನಾಯಕರು ಲೇವಡಿ ಮಾಡಿದ್ದು, ಇದಕ್ಕೆ ಜನರ ಬಳಿ ಉತ್ತರ ಕೇಳಲಿ, ಸತ್ಯವನ್ನು ಜನರೆ ಹೇಳ್ತಾ ಇದಾರೆ. ಇವರ ಸುಳ್ಳುಗಳು ಈ ಭಾರಿ ಮೋದಿಯವರನ್ನ ಕೆಳಗಿಳಿಸುತ್ತವೆ ಎಂದರು.

ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಗೆಲುವು ಖಚಿತ ಅಂತಾ ನಾವು ನೋಡ್ತಾ ಇದ್ದೇವೆ.
ಇಂಡಿಯಾ ಆದ ನಂತರ ಬಿಜೆಪಿ ಪಕ್ಷವೂ ತತ್ತರಿಸಿ ಹೋಗಿದೆ. ಕಾಂಗ್ರೆಸ್‌ಗೆ ಶಕ್ತಿಯನ್ನು ಜನರೇ ಕೊಡ್ತಾರೆ ಎಂಬ ವಿಶ್ವಾಸ ನಮಗಿದೆ ಎಂದರು.

ಕಾಂಗ್ರೇಸ್ ಪಕ್ಷದಲ್ಲಿ ಬಣಗಳ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ, ಡಿಕೆಶಿ ಬಳಿ ನಾವು ಕುಳಿತು ಮಾತಾಡಿದ್ದೇವೆ, ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ಬ್ಯೂಸಿ ಆಗಿದ್ದೇವೆ, ಎಲ್ಲೂ ನಮ್ಮಲ್ಲಿ ಬಣವೇ ಇಲ್ಲಾ ಇದು ಬಿಜೆಪಿಯ ಸೃಷ್ಟಿ ಮಾತ್ರ ಎಂದು ಜಾರಿಕೊಂಡರು.

ಬರಗಾಲದಲ್ಲಿ ಹೊಸ ಕಾರು ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾರು ಮೊದಲೆ ಕೊಡಬೇಕಾಗಿತ್ತು, ಮೊದಲು ಬುಕ್ ಆಗಿದ್ದ ಕಾರುಗಳು ಇವು. ಬರಗಾಲ ಟೈಮ್‌ನಲ್ಲಿ ಆರ್ಡರ್ ಮಾಡಿ ಖರೀದಿ ಮಾಡಿದ್ದ ಕಾರುಗಳು ಅಲ್ಲ ಎಂದು ನುಣುಚಿಕೊಂಡರು.
ಈ ವೇಳೆ ವಿಧಾನ ಪರಿಷತ್ ಸಚೇತಕ ಸಲೀಂ ಅಹ್ಮದ, ಶಾಸಕ ಪ್ರಕಾಶ ಕೋಳಿವಾಡ, ಬಸವರಾಜ ಶಿವಣ್ಣನವರ, ಕಾಂಗ್ರೆಸ್ ಜಿಲ್ಲಾದ್ಯಕ್ಷ ಎಂ.ಎಂ. ಹಿರೇಮಠ, ಮುಖಂಡ ಸೋಮಣ್ಣ ಬೇವಿನಮರದ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!