Saturday, December 2, 2023

Latest Posts

ಸಾವಯವ ಕೃಷಿಯಿಂದ ರೈತರ ಆತ್ಮಹತ್ಯೆ ತಡೆಯಬಹುದು: ಬಸವಪ್ರಭು ಸ್ವಾಮೀಜಿ

ಹೊಸದಿಗಂತ ವರದಿ,ಚಿತ್ರದುರ್ಗ:

ಸಾವಯವ ಕೃಷಿ ಮಾಡುತ್ತಾ ಹೋದರೆ ಸಮಾಜದಲ್ಲಿ ರೈತರ ಆತ್ಮಹತ್ಯೆಗಳು ಕಡಿಮೆಯಾಗುತ್ತವೆ ಎಂದು ಮುರುಘಾಮಠದ ಉಸ್ತುವಾರಿ ಶ್ರೀಗಳಾದ ಬಸವಪ್ರಭು ಸ್ವಾಮೀಜಿ ಹೇಳಿದರು.

ಶರಣ ಸಂಸ್ಕೃತಿ ಉತ್ಸವ – ೨೦೨೩ ಅಂಗವಾಗಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯಿತಿ ಇವರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೃಷಿಮೇಳ, ಕೃಷಿ ಮತ್ತು ಕೈಗಾರಿಕೆ ವಸ್ತು ಪ್ರದರ್ಶನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗೆ ರೈತರೇ ಬೆಲೆ ನಿಗದಿ ಮಾಡುವಂತಾಗಬೇಕು. ಸರ್ಕಾರವಾಗಲಿ, ಮಧ್ಯವರ್ತಿಗಳಿಂದಾಗಲಿ ಬೆಲೆ ನಿಗದಿಯಗುವುದನ್ನು ತಡೆದರೆ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ ಎಂದು ನುಡಿದರು.

ರಾವಂದೂರು ಶ್ರೀ ಮುರುಘಾ ಮಠದ ಮೋಕ್ಷಪತಿ ಮಹಾಸ್ವಾಮಿಗಳು ಮಾತನಾಡಿ, ೧೯೭೮-೧೯೮೦ರಲ್ಲಿ ತಲಾದಾಯ ೨೫೦ ರಿಂದ ೩೦೦ ರೂ.ಗಳಷ್ಟಿತ್ತು. ಇಂದಿನ ತಲಾದಾಯ ೨೫-೩೦ ಸಾವಿರ ಇದೆ. ಕಾರಣ ಸಾವಯವ ಕೃಷಿಗೆ ಪ್ರಾಧಾನ್ಯತೆ. ಕೃಷಿಯ ಬಗ್ಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ಶ್ರೀಮಠದ ಹಿಂದಿನ ಹಿರಿಯ ಅನೇಕ ಹಿರಿಯ ಸ್ವಾಮೀಜಿಗಳು ನೀಡುತ್ತಾ ಬಂದಿದ್ದಾರೆ. ಗಿಡಮರಗಳನ್ನು ನೆಡಿ, ಮಳೆ ನೀರನ್ನು ಸಂರಕ್ಷಿಸುವತ್ತ ರೈತರು ಗಮನಹರಿಸಬೇಕಾಗಿದೆ ಎಂದು ತಿಳಿಸಿದರು.

ಕೃಷಿಮೇಳ, ಕೃಷಿ ಮತ್ತುಕೈಗಾರಿಕ ವಸ್ತು ಪ್ರದರ್ಶನವನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಅಶೋಕ್ ಎಸ್. ಆಲೂರು ಉದ್ಘಾಟಿಸಿ ಮಾತನಾಡಿ, ಎಲ್ಲಾ ಕಡೆ ಬರೀ ಚಿನ್ನದ ಮಾತೆ, ಅನ್ನದ ಮಾತೇ ಇಲ್ಲ. ದೇವರ ಸಮಾನವಾದ ಮಣ್ಣಿನ ಕಡೆಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ಇಂದಿನ ಜನ ನೀಡುತ್ತಿಲ್ಲ. ಮಣ್ಣಿನ ಆರೋಗ್ಯದ ಕಡೆ ಗಮನವನ್ನೂ ನೀಡುತ್ತಿಲ್ಲ. ಶೇಕಡಾ ೮೦ ರಿಂದ ೮೫ ರಷ್ಟು ಜನ ಒಂದು ಎಕರೆಗೂ ಕಡಿಮೆ ಕೃಷಿಭೂಮಿ ಹೊಂದಿದ್ದಾರೆ. ಅವರುಗಳಿಗೆ ಕೃಷಿ ಉಪಯೋಗಿ ಸಲಕರಣೆ ಬಳಕೆಗಳ ಮಾಹಿತಿ ಕಡಿಮೆಯಾಗುತ್ತಾ ಹೋಗಿದ್ದು, ಅದನ್ನು ಸುಧಾರಿಸಲು ಇಂತಹ ಕೃಷಿ ಸಮಾವೇಶಗಳು ಅವಶ್ಯವಾಗಿವೆ ಎಂದರು.

ಎಷ್ಟೇ ಗೊಬ್ಬರ ಹಾಕಿದರೂ ಇಳುವರಿ ಕಡಿಮೆ ಬರುತ್ತಿದೆ. ಕಾರಣ ಸಾವಯವ ಕೃಷಿಯ ಉಪಯೋಗ ಕಡಿಮೆ ಇರುವುದು. ಜನಸಂಖ್ಯೆ ಹೆಚ್ಚಾದಂತೆ ಜಮೀನುಗಳು ಕಡಿಮೆಯಾಗುತ್ತಿವೆ. ಇಸ್ರೇಲ್ ರಾಷ್ಟ್ರದಲ್ಲಿ ಒಂದು ಇಂಚು ನೀರು ಮಳೆ ಬೀಳುತ್ತಿದೆ. ಯುರೋಪ್ ದೇಶಗಳಲ್ಲಿ ನೀರನ್ನು ಸಂಸ್ಕರಿಸಿ ಶುದ್ಧೀಕರಿಸಿ ಉತ್ತಮ ಬೆಳೆ ಬೆಳೆಯುತ್ತಿದ್ದಾರೆ. ಆದರೆ ನಮ್ಮಲ್ಲಿ ನೀರಿನ ಕೊರತೆ ಬಾರದಂತೆ ಅದರ ಸದುಪಯೋಗ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡು ಕೃಷಿಯನ್ನು ಲಾಭದಾಯಕರೂಪದಲ್ಲಿ ನೋಡಿದರೆ ಸದುಪಯೋಗಹೇಗೆ ಮಾಡಬೇಕೆಂದು ಗೊತ್ತಾಗುತ್ತದೆ ಎಂದು ಹೇಳಿದರು.

ಇತಿಹಾಸ ಸಂಶೋಧಕರಾದಡಾ.ಬಿ.ರಾಜಶೇಖರಪ್ಪ ಮಾತನಾಡಿ, ಬಸವಾದಿ ಶರಣರಿಂದ ಸಾಗಿ ಬಂದಿರುವ ಮಠ ಶ್ರೀಮರುಘಾಮಠ. ಮುರುಘಾ ಪರಂಪರೆಯ ಸ್ವಾಮಿಗಳು ಸಾಹಿತ್ಯ ಪಂಡಿತರು.ಸಂದರ್ಭ ಬಂದಾಗ ರಾಜರುಗಳನ್ನು ವಿರೋಧಿಸುವವರುಆಗಿದ್ದರು.ಅಪರೂಪದ ಪ್ರಜ್ಞೆಯನ್ನು ಬೆಳಗಿದವರು ಎಂದು ನುಡಿದರು.

ಪ್ರಗತಿಪರ ರೈತರಾದ ದೇವರಮರಿಕುಂಟೆ ಅರ್.ಎ.ದಯಾನಂದಮೂರ್ತಿ ಮಾತನಾಡಿ, ನಾನು ೫ ಎಕರೆ ಜಮೀನಿನಲ್ಲಿ ೧೦೦೦ ಅಡಿಕೆ, ೧೦೦೦ ಬಾಳೆ ಹಾಗೂ ಸಿಲಾವರ್, ಹೆಬ್ಬೇವು, ಮಾವು-ಹಲಸು ಹೀಗೆ ವಿವಿಧ ರೀತಿ ತಳಿಯ ಗಿಡಗಳನ್ನು ಬೆಳೆದು ತೋರಿಸಿದ್ದೇನೆ. ಇವೆಲ್ಲದಕ್ಕೂ ಸಾಯವಯ ಕೃಷಿ ಕಾರಣವಾಗಿದೆ. ಆದ್ದರಿಂದಲೇ ಅನೇಕ ಪ್ರಶಸ್ತಿಗಳು ನನಗೆ ದೊರೆತಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೆಬ್ಬಾಳು ಶ್ರೀ ಮಹಾಂತ ರುದ್ರೇಶ್ವರ ಮಠದ ಮಹಾಂತ ರುದ್ರೇಶ್ವರ ಸ್ವಾಮಿಗಳು, ಶರಣ ಸಂಸ್ಕೃತಿ ಉತ್ಸವ – ೨೦೨೩ರ ಗೌರವಾಧ್ಯಕ್ಷರಾದ ಅಥಣಿ ಗಚ್ಚಿನ ಮಠದ ಶಿವಬಸವ ಮಹಾಸ್ವಾಮಿಗಳು, ಬಸವ ಸಮಿತಿ ಅಧ್ಯಕ್ಷರಾದ ಅರವಿಂದಜತ್ತಿ, ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಬಿ.ಎಸ್.ರೇಖಾ, ಕೆ.ಪಿ.ಟಿ.ಸಿ.ಎಲ್. ನಿವೃತ್ತ ನಿರ್ದೇಶಕ ಕೆ.ವಿ.ಶಿವಕುಮಾರ್, ಚಿತ್ರದುರ್ಗ ಬಿಜೆಪಿ ಮುಖಂಡ ಜಿ.ಎಸ್.ಅನಿತ್‌ಕುಮಾರ್, ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ಶರಣ ಸಂಸ್ಕೃತಿ ಉತ್ಸವ-೨೦೨೩ರ ಕಾರ್ಯಾಧ್ಯಕ್ಷ ಕೆ.ಸಿ.ನಾಗರಾಜ್ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!