September 23, 2026
Wednesday, September 23, 2026
spot_img

ಕಲಬುರಗಿ ಯುವತಿ ನಾಪತ್ತೆ ಪ್ರಕರಣ: ಹೇಬಿಯಸ್ ಕಾರ್ಪಸ್ ಅರ್ಜಿ ವಜಾ

ಹೊಸದಿಗಂತ ವರದಿ ಕಲಬುರಗಿ:

ಕಲಬುರಗಿ ಜಿಲ್ಲೆಯ ಹಿರೇನಂದೂರು ಸ್ಟೇಷನ್ ತಾಂಡಾ ನಿವಾಸಿ ಸುರೇಖಾ ಪವಾರ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಕಲಬುರಗಿ ಹೈಕೋರ್ಟ್ ವಜಾಗೊಳಿಸಿದೆ.

ನಾಪತ್ತೆಯಾಗಿರುವ ಸುರೇಖಾ ಪವಾರ್ ಅವರನ್ನು ಪತ್ತೆಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೋರಿ ಕುಟುಂಬಸ್ಥರು ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ಯುವತಿಯ ಪತ್ತೆಗಾಗಿ ಪೊಲೀಸರು ಕೈಗೊಂಡಿರುವ ಕ್ರಮಗಳ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಯುವತಿ ತನ್ನ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದು, ಸ್ವಂತ ಇಚ್ಛೆ ಮೇರೆಗೆ ತೆರಳಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ಅಲ್ಲದೆ, ಪ್ರಕರಣವು ನಾಪತ್ತೆ ಪ್ರಕರಣವಾಗಿ ದಾಖಲಾಗಿದ್ದು, ಇಂತಹ ಸಂದರ್ಭಗಳಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ನಿರ್ವಹಣಾರ್ಹ (ಮೇಂಟೇನಬಲ್) ಆಗುವುದಿಲ್ಲ ಎಂಬ ವಾದವನ್ನು ನ್ಯಾಯಾಲಯದ ಮುಂದೆ ಮಂಡಿಸಲಾಯಿತು.

ಇನ್ನೊಂದೆಡೆ, ಯುವತಿಯನ್ನು ಅಪಹರಿಸಲಾಗಿದೆ ಎಂದು ಆರೋಪಿಸಿ ಕುಟುಂಬಸ್ಥರು ಅಪಹರಣ ಪ್ರಕರಣ ದಾಖಲಿಸುವಂತೆ ದೂರು ನೀಡಿದ್ದರೂ, ಪೊಲೀಸರು ನಾಪತ್ತೆ ಪ್ರಕರಣವನ್ನಷ್ಟೇ ದಾಖಲಿಸಿರುವುದಾಗಿ ಅರ್ಜಿದಾರರ ಪರ ವಕೀಲರು ವಾದಿಸಿದರು.
ಉಭಯ ಪಕ್ಷಗಳ ವಾದ ಆಲಿಸಿದ ನ್ಯಾಯಾಲಯ, ನಾಪತ್ತೆ ಪ್ರಕರಣದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ನಿರ್ವಹಣಾರ್ಹವಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿತು.

ಈ ಮಧ್ಯೆ, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ಬಗ್ಗೆ ಕುಟುಂಬಸ್ಥರು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?

ಹಿರೇನಂದೂರು ಸ್ಟೇಷನ್ ತಾಂಡಾ ನಿವಾಸಿ ಸುರೇಖಾ ಪವಾರ್ ಅವರು ಮೇ 20ರಂದು ಕೆಲಸಕ್ಕೆ ತೆರಳಿದ ಬಳಿಕ ನಾಪತ್ತೆಯಾಗಿದ್ದರು. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯ ಪತ್ತೆಗಾಗಿ ಪೊಲೀಸರು ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕುಟುಂಬಸ್ಥರು ಆಕೆಯನ್ನು ವಿದೇಶಿ ಯುವಕ ಪುಸಲಾಯಿಸಿ ಕರೆದೊಯ್ದಿದ್ದಾನೆ ಎಂದು ಆರೋಪಿಸಿದ್ದಾರೆ. ಆದರೆ ತನಿಖೆ ಇನ್ನೂ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !