ಹೊಸದಿಗಂತ ವರದಿ ಕಲಬುರಗಿ:
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶ್ರೀ ರಾಘವ ಚೈತನ್ಯರ ಸಮಾಧಿಯ ಮೇಲಿನ ಶಿವಲಿಂಗಕ್ಕೆ ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠದ ಆದೇಶದಂತೆ ಪೋಲಿಸರ ಸರ್ಪ ಗಾವಲಿನಲ್ಲಿ ಅರ್ಜಿದಾರ ಸೇರಿ 14 ಜನ ಹಿಂದು ಮುಖಂಡರು ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆಯೊಂದಿಗೆ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಿದ್ದಾರೆ.
ಫೆ.೧೫ರ ಮಹಾಶಿವರಾತ್ರಿಯ ಪವಿತ್ರ ದಿನದಂದು ಪ್ರತಿ ವರ್ಷದಂತೆ ಈ ವರ್ಷವೂ ರಾಘವರ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ನೀಡುವಂತೆ ಅರ್ಜಿದಾರರು ಹೈಕೋರ್ಟ್ಗೆ ಪ್ರತ್ಯೇಕ ಎರಡು ರಿಟ್ ಅರ್ಜಿ ಸಲ್ಲಿಸಿದ್ದರು. ಮೊದಲನೇ ಅರ್ಜಿದಾರ ಸಿದ್ರಾಮಯ್ಯ ಹಿರೇಮಠ ಹಾಗೂ ಎರಡನೇ ಅರ್ಜಿದಾರ ಗುರುಶಾಂತ್ ಟೆಂಗಳಿ ಸೇರಿದಂತೆ ಎರಡು ಅರ್ಜಿ ವಿಚಾರಣೆ ನಡೆಸಿ ಒಟ್ಟು 14 ಜನರಿಗೆ ಪೂಜೆಗೆ ಅನುಮತಿ ನೀಡಿ ಕಲಬುರಗಿ ಹೈಕೋರ್ಟ್ ಆದೇಶಿಸಿದ್ದು, ಹೈಕೋರ್ಟ್ ಆದೇಶದಂತೆ ಭಾನುವಾರದ ನಿಗದಿತ ಸಮಯವಾದ ಒಳಗಾಗಿ ದರ್ಗಾದಲ್ಲಿನ ಶಿವಲಿಂಗಕ್ಕೆ ಹಿಂದು ಮುಖಂಡರು ಪೂಜೆ ಸಲ್ಲಿಸಲಿದ್ದಾರೆ.
ಇದನ್ನೂ ಓದಿ:
ಜೊತೆಗೆ ಮಹಾಶಿವರಾತ್ರಿಯ ಪ್ರಯುಕ್ತ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿರುವ ಶ್ರೀ ರಾಘವ ಚೈತನ್ಯರ ಸಮಾಧಿಯ ಮೇಲಿನ ಶಿವಲಿಂಗಕ್ಕೆ ಪೂಜೆ ನಡೆಯಲಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನಾದ್ಯಂತ ಮಧ್ಯ ಮಾರಾಟ ನಿಷೇಧಿಸಿ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಶನಿವಾರ ಆದೇಶಿಸಿದ್ದು, ಫೆ.14ರ ಮಧ್ಯರಾತ್ರಿ 11 ಗಂಟೆಯಿಂದ ಫೆ.16ರ ಬೆಳಿಗ್ಗೆ 6 ಗಂಟೆಯವರೆಗೂ ಎಲ್ಲಾ ಮಧ್ಯದ ಅಂಗಡಿ ಹಾಗೂ ಬಾರ್ ಮುಚ್ಚುವಂತೆ ಸೂಚಿಸಿದ್ದಾರೆ.
ಪಟ್ಟಣದಾದ್ಯಂತ ನಿಷೇದಾಜ್ಞೆ ಜಾರಿಗೆ ಮಾಡಿದ್ದು, ದರ್ಗಾದ ಸುತ್ತುವರಿದ ಪ್ರದೇಶದಲ್ಲಿ ಪೋಲಿಸ್ ಬಂದೋಬಸ್ತ್ ನಿಯೋಜನೆ ಮಾಡಿ,ಅಹಿತಕರ ಘಟನೆ ಜರುಗದಂತೆ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.
900 ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸುಮಾರು 40 ಸಿಸಿಟಿವಿ ಕ್ಯಾಮೆರಾ, ವೈಮಾನಿಕ ನಿಗಾವಿಗಾಗಿ 4 ಡ್ರೋನ್‌ಗಳನ್ನು ಬಳಸಲಾಗುತ್ತಿದೆ.ಆಳಂದ ಪಟ್ಟಣದ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳಲ್ಲಿ ತಪಾಸಣೆ ಚೌಕಿ ಸ್ಥಾಪಿಸಲಾಗಿದೆ. ನಾಳೆ ಸಾರ್ವಜನಿಕರಿಗೆ ಯಾವುದೇ ಅಸೌಕರ್ಯ ಉಂಟಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.



