ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017 ರಲ್ಲಿ ನಡೆದ ಕಲಾಯಿ ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಭರತ್ ಕುಮ್ಡೇಲ್ ಶುಕ್ರವಾರ ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಖುದ್ದು ಶರಣಾಗಿದ್ದಾನೆ.
ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಗುರುತಿಸಿಕೊಂಡಿದ್ದ ಭರತ್ ಕುಮ್ಡೇಲ್ ಕಳೆದ ಮೂರ್ನಾಲ್ಕು ತಿಂಗಳಿನಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಈತನ ವಿರುದ್ಧ ನ್ಯಾಯಾಲದಿಂದ ವಾರಂಟ್ ಕೂಡ ಜಾರಿಯಾಗಿತ್ತು.
ಶುಕ್ರವಾರ ತನ್ನ ವಕೀಲರ ಮೂಲಕ ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸ್ವಯಂ ಪ್ರೇರೀತವಾಗಿ ಶರಣಾಗಿದ್ದು, ನ್ಯಾಯಾಲಯವು ಈತನಿಗೆ ಅ.25 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಮಧ್ಯೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳತ್ತಮಜಲಿನಲ್ಲಿ ನಡೆದ ಅಬ್ದುಲ್ ರಹೀಂ ಕೊಲೆ ಪ್ರಕರಣದಲ್ಲು ಪ್ರಮುಖ ಆರೋಪಿಯನ್ನಾಗಿ ಪೊಲೀಸರು ಗುರುತಿಸಿದ್ದು,ಈ ಕೃತ್ಯ ನಡೆದ ದಿನದಿಂದಲು ಇದುವರೆಗೂ ಭರತ್ ಪೊಲೀಸರ ಕೈಗೆ ಸಿಕ್ಕಿರಲಿಲ್ಲ,ನ್ಯಾಯಾಲಯದ ವಾರಂಟ್ ಪಡೆದು ಮನೆಗೂ ದಾಳಿ ನಡೆಸಿದ್ದರೂ ಪೊಲೀಸರಿಗೆ ಸುಳಿವು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.