ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ನಟ ಕಿಶೋರ್ ಹಾಗೂ ಶ್ರದ್ಧಾ ಶ್ರೀನಾಥ್ ಅಭಿನಯದ ತಮಿಳು-ತೆಲುಗು ದ್ವಿಭಾಷಾ ಚಿತ್ರ ʼಕಲಿಯುಗಂʼ ಮೂಲಕ ಮತ್ತೊಮ್ಮೆ ತಮ್ಮ ನಟನೆಯ ಸಾಮರ್ಥ್ಯ ತೋರಿಸಿದ್ದಾರೆ. ಈ ಸಿನಿಮಾ ಮೇ 9ರಂದು ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, ಭವಿಷ್ಯವನ್ನು ಆಧರಿಸಿ ನಿರ್ಮಿಸಲಾದ ಸಿನಿಮಾ ಎನ್ನುವ ಕಾರಣದಿಂದ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಏಕೆಂದರೆ ʼಕಲಿಯುಗಂʼ ಈಗ ಓಟಿಟಿಗೆ ಬಂದಿದೆ!
ಈ ಸೈನ್ಸ್ ಫಿಕ್ಷನ್ ಕತೆ 2064ರ ಭವಿಷ್ಯವನ್ನು ಚಿತ್ರಿಸುತ್ತದೆ. ಆಗ ಮಾನವರು ಹೇಗೆ ಬದುಕುತ್ತಿದ್ದರು? ತಂತ್ರಜ್ಞಾನ ಸಮಾಜವನ್ನು ಯಾವರೀತಿ ಬೆಳೆಸಿದೆ? ಎನ್ನುವ ಹಲವಾರು ಭಾವನೆಗಳನ್ನು ಚಿತ್ರದಲ್ಲಿ ಪ್ರಸ್ತುತಪಡಿಸಲಾಗಿದೆ.
ಈ ಚಿತ್ರವನ್ನು ಕೆ.ಎಸ್. ರಾಮಕೃಷ್ಣ ಹಾಗೂ ಕೆ. ರಾಮ್ಚರಣ್ ನಿರ್ಮಿಸಿ, ಪ್ರಮೋದ್ ಸುಂದರ್ ಅವರ ನಿರ್ದೇಶನದಲ್ಲಿ ಮೂಡಿಬಂದಿದೆ. ಇದೇ ಅವರ ಡೈರೆಕ್ಟರ್ ಆಗಿನ ಮೊದಲ ಪ್ರಯತ್ನ. ಈ ಚಿತ್ರದ ಟೈಟಲ್ ಕೂಡಾ ಪುರಾಣದಲ್ಲಿ ಉಲ್ಲೇಖವಾಗಿರುವ ʼಕಲಿಯುಗʼದ ಸಂಕೇತವಾಗಿ ಆಯ್ಕೆಯಾಗಿದೆ.
ʼಕಲಿಯುಗಂʼ ಜೂನ್ 20ರಿಂದ Simply South ವೇದಿಕೆಯಲ್ಲಿ ಭಾರತವನ್ನು ಹೊರತುಪಡಿಸಿ ಇತರ ದೇಶಗಳಲ್ಲಿ ಸ್ಟ್ರೀಮ್ ಆಗಲಿದೆ. ಈ ಮೂಲಕ ಪ್ರಪಂಚದಾದ್ಯಂತ ಕನ್ನಡ, ತಮಿಳು ಹಾಗೂ ತೆಲುಗು ಪ್ರೇಮಿಗಳು ಈ ವಿಭಿನ್ನ ಪ್ರಯೋಗವನ್ನು ನೋಡಬಹುದಾಗಿದೆ.
ಚಿತ್ರದ ತಂತ್ರಜ್ಞಾನ ವರ್ಕ್ ಕೂಡ ಶ್ಲಾಘನೀಯ – ಕಂಪ್ಯೂಟರ್ ಗ್ರಾಫಿಕ್ಸ್ ಕೆಲಸ ನಾರ್ವೆನಲ್ಲಿ ಮಾಡಲಾಗಿದೆ ಎಂಬುದನ್ನು ಚಿತ್ರತಂಡ ತಿಳಿಸಿದೆ. ಜೊತೆಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ನಿರ್ಮಾಪಕ ಮಣಿರತ್ನಂ ಕೂಡಾ ಈ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದ ಪಾತ್ರಗಳಲ್ಲಿ ಇನಿಯನ್ ಸುಬ್ರಮಣಿ, ಹ್ಯಾರಿ, ಅಸ್ಮಲ್, ಸಂತೋಷ್, ಆರ್ಯ ಲಕ್ಷ್ಮಿ, ಮಾಸ್ಟರ್ ರೋನಿತ್ ಸೇರಿದ್ದಾರೆ. ಸಂಗೀತ ನಿರ್ದೇಶನ ಡಾನ್ ವಿನ್ಸೆಂಟ್ ಅವರದ್ದು.