‘ಕಲ್ಲಕೆರೆ ಮಾದೇವಿ’ ಪೌರಾಣಿಕ ಕೊಡವ ಚಲನಚಿತ್ರ ಲೋಕಾರ್ಪಣೆ

ಹೊಸದಿಗಂತ ವರದಿ ನಾಪೋಕ್ಲು:

ಪಿ ಅಂಡ್ ಜಿ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ, ಕೊಡಗಿನ ಆದಿ ಗ್ರಂಥ ಪಟ್ಟೋಳೆ ಪಳಮೆಯನ್ನು ಆಧರಿಸಿ ನಿರ್ಮಾಣಗೊಂಡಿರುವ ‘ಕಲ್ಲಕೆರೆ ಮಾದೇವಿ’ ಪೌರಾಣಿಕ ಕೊಡವ ಚಲನಚಿತ್ರ ಕೋಕೇರಿಯ ಮಹಿಳಾ ಸಮಾಜದಲ್ಲಿ ತೆರೆ ಕಂಡಿತು.

ಚಲನಚಿತ್ರ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮನು ಮುತ್ತಪ್ಪ ಅವರು, ಉತ್ತಮ ಪೌರಾಣಿಕ ಕೊಡವ ಚಲನಚಿತ್ರವೊಂದು ಬಿಡುಗಡೆಗೊಂಡಿದೆ. ಕೊಡವ ಜನಾಂಗದವರು ಚಲನಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದರು. ವೀಕ್ಷಕರ ಪ್ರೋತ್ಸಾಹದಿಂದ ನಿರ್ಮಾಪಕಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿತ್ರದ ನಿರ್ಮಾಪಕಿ ಪಟ್ಟಡ ರೀನಾ ಪ್ರಕಾಶ್ ಮಾತನಾಡಿ, ಕಲ್ಲಕೆರೆ ಮಾದೇವಿ ಚಲನಚಿತ್ರವನ್ನು ಹೊರ ತರಲು ಚಿತ್ರತಂಡ ತುಂಬಾ ಶ್ರಮವಹಿಸಿದೆ. ಕೊಡಗಿನ ಪ್ರಥಮ ಪೌರಾಣಿಕ ಕಥೆಯಾಗಿ ಚಿತ್ರ ಮೂಡಿ ಬಂದಿದ್ದು ಕೊಡವ ಸಾಂಪ್ರದಾಯಿಕ ವಸ್ತುಗಳಾದ ದುಡಿ, ಪತ್ತಾಕ್ ಮತ್ತಿತರ ಪರಿಕರಗಳ ಪೌರಾಣಿಕ ಹಿನ್ನೆಲೆಯನ್ನು ವಿವರಿಸಲಾಗಿದೆ ಚಿತ್ರದಲ್ಲಿ ಪಾಲ್ಗೊಂಡವರು ನುರಿತ ಕಲಾವಿದರಲ್ಲ. ಆದರೆ ಚಿತ್ರತಂಡ ಆಸಕ್ತಿಯಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ತಂಡದ ಎಲ್ಲಾ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದರು.

ಕೋಕೇರಿ ಗ್ರಾಮದ ಹಿರಿಯರಾದ ಚೇನಂಡ ಗೌರಿ ಈರಪ್ಪ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಸಮಾರಂಭದಲ್ಲಿ ಚೆಯ್ಯಂಡಾಣೆ ಕೊಡವ ಸಮಾಜದ ಅಧ್ಯಕ್ಷ ಮುಂಡ್ಯೋಳಂಡ ಬಿದ್ದಪ್ಪ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಶಿವಕುಮಾರ್ ನಾಣಯ್ಯ, ಮಹಿಳಾ ಸಮಾಜ ಅಧ್ಯಕ್ಷೆ ಪೆಮ್ಮಂಡ ಶಶಿ ಕಾವೇರಿಯಮ್ಮ, ಸಹ ನಿರ್ಮಾಪಕಿ ಕಾವ್ಯ ಸಂಜು, ಉದ್ಯಮಿ ಆರ್ ಉಮೇಶ್, ಮಡಿಕೇರಿ ಸಿ ಎಂ ಸಿ ಅಧ್ಯಕ್ಷೆ ನೆರವಂಡ ಅನಿತಾ, ಚಿತ್ರದ ತಂತ್ರಜ್ಞರು, ನಿರ್ಮಾಣಕ್ಕೆ ಸಹಕರಿಸಿದ ಎಲ್ಲಾ ಕಲಾವಿದರ ಬಳಗ, ಸಾರ್ವಜನಿಕರು ಉಪಸ್ಥಿತರಿದ್ದರು.
ಪಿ ಅಂಡ್ ಜಿ ಕ್ರಿಯೇಷನ್ ಚಲನಚಿತ್ರ ನಿರ್ದೇಶಕ ಬಾಳೆಯಡ ಪ್ರತೀಶ್ ಪೂವಯ್ಯ ಸ್ವಾಗತಿಸಿ ಮುಂಡಚಾಡಿರ ರಿನ್ನಿ ಭರತ್ ಕಾರ್ಯಕ್ರಮ ನಿರೂಪಿಸಿದರು. ಆಚೆಯಡ ಗಗನ್ ಗಣಪತಿ ವಂದಿಸಿದರು.
ಬಳಿಕ ಸಾರ್ವಜನಿಕರಿಗೆ ಮೂರು ಪ್ರದರ್ಶನಗಳನ್ನು ಏರ್ಪಡಿಸಲಾಯಿತು. ಚಿತ್ರ ವೀಕ್ಷಿಸಿದ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತಗೊಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!