ಶತಮಾನ ಕಂಡ ಕಲ್ಯಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ‘ಕರುನಾಡಶ್ರೀ’ ಪ್ರಶಸ್ತಿಯ ಗರಿ

ಗಣೇಶ್ ನಾಯಕ್, ಸಾಣೂರು

ಕಾರ್ಕಳ: ಗ್ರಾಮಸ್ಥರ ಸಹಕಾರ.. ಶಿಕ್ಷಕರ ನಿಷ್ಕಲ್ಮಶ ಪ್ರಾಮಾಣಿಕ ಸೇವೆ. ಮಕ್ಕಳಲ್ಲಿ ಕಲಿಯುವ ಹುಮ್ಮಸ್ಸು. ಇಷ್ಟು ಇದ್ದರೆ ಸರ್ಕಾರಿ ಶಾಲೆ ಕೂಡ ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆಯಿಲ್ಲದಂತೆ ಅಭಿವೃದ್ಧಿ ಪಥದತ್ತ ಸಾಗಬಹುದು. ಇದಕ್ಕೆ ಸಾಕ್ಷಿಯಾಗಿ ನಿಂತಿದ್ದ ಕಾರ್ಕಳ ತಾಲೂಕಿನ ಕಲ್ಯಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕರುನಾಡಶ್ರಿ ಪ್ರಶಸ್ತಿ ಲಭಿಸಿದೆ.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಲ್ಲದೇ ಸರ್ಕಾರಿ ಶಾಲೆಗಳು ಮುಚ್ಚಲ್ಪಡುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಶಾಲೆಗಳು ಮುಚ್ಚಿದರೆ, ಇನ್ನು ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತ ಮುಚ್ಚುವ ಹಂತ ತಲುಪುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ತಾಲೂಕಿನ ಕಲ್ಯಾದ ಸರಕಾರಿ ಪ್ರಾಥಮಿಕ ಶಾಲೆ ಸಾಧನೆ ಗಮನೀಯವಾಗಿದೆ. ಗ್ರಾಮೀಣ ಭಾಗದಲ್ಲಿ ಕಾರ್ಕಳ ಹೆಬ್ರಿ ತಾಲೂಕು ವ್ಯಾಪ್ತಿಯ ಮೇಗದ್ದೆಯ ಸರಕಾರಿ ಪ್ರಾಥಮಿಕ ಶಾಲೆ, ಅಂಡಾರು ಪಕ್ಕಿಬೈಲು ಸರಕಾರಿ ಶಾಲೆ, ಸಾಣೂರು ಪುಲ್ಕೇರಿ ಸರಕಾರಿ ಶಾಲೆ ಸೇರಿದಂತೆ ಒಟ್ಟು ನಾಲ್ಕು ವರ್ಷಗಳಲ್ಲಿ ಹನ್ನೆರಡು ಕನ್ನಡ ಶಾಲೆಗಳು ಮುಚ್ಚಿವೆ. ಇದನ್ನರಿತ ಕಾರ್ಕಳ ತಾಲೂಕಿನ ಸ್ಥಳೀಯ ದಾನಿ ಕರ್ನಾಟಕ ರಾಜ್ಯ ಕ್ವಾರಿ ಹಾಗೂ ಕ್ರಷಸ್ ಅಸೋಸಿಯೇಶನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಅವರು ಕನ್ನಡ ಶಾಲೆಗಳ ಉಳಿವಿಗಾಗಿ ಕರುನಾಡಶ್ರೀ ಪ್ರಶಸ್ತಿ ನೀಡಿ ಸಹಕರಿಸುತ್ತಿದ್ದಾರೆ. ಇದರಿಂದಾಗಿ ಹೆಚ್ಚಿನ ಸರಕಾರಿ ಶಾಲೆಗಳಲ್ಲಿ ಸಾಹಿತ್ಯಿಕ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ.

ಅತ್ಯುತ್ತಮ ಕನ್ನಡ ಶಾಲೆೆ ಪ್ರಶಸ್ತಿ:
ತಾಲೂಕಿನಲ್ಲಿ ಹೆಚ್ಚು ಕನ್ನಡದ ಕಾರ್ಯಗಳಲ್ಲಿ ತೊಡಗಿಸಿ ಕೊಂಡು ವಿದ್ಯಾರ್ಥಿಗಳಿಗೆ, ಹಾಗೂ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಿಗೆ ದಾಖಲಾತಿ ಹೆಚ್ಚಳ, ಹಾಗೂ ವಿವಿಧ ಪಠ್ಯೆತರ ಕೌಶಲ್ಯಗಳಲ್ಲಿ ವಿಶೇಷತೆಯನ್ನು ಹೊಂದಿದ್ದರೆ ಅಂತಹ ಸರಕಾರಿ ಶಾಲೆಗಳಿಗೆ ತಾಲೂಕು ಮಟ್ಟದಲ್ಲಿ ಕರುನಾಡ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಕಳೆದ 2023ರಲ್ಲಿ ಗಣಿತನಗರದ ಜ್ಞಾನಸುಧಾ ಸಭಾಂಗಣದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ನಲ್ಲೂರು ಸರಕಾರಿ ಪ್ರಾಥಮಿಕ ಶಾಲೆಗೆ ಕರುನಾಡ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈ ಬಾರಿ ಶಿರ್ಲಾಲು ಪದವಿ ಪೂರ್ವ ಕಾಲೇಜಿನಲ್ಲಿ ಡಿ.6 ರಂದು ನಡೆದ 2024ರ ಸಾಹಿತ್ಯ ಸಮ್ಮೇಳನದಲ್ಲಿ ಕಲ್ಯಾದ ಸರಕಾರಿ ಪ್ರಾಥಮಿಕ ಶಾಲೆ ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ:
ಕಾರ್ಕಳ ವಿಧಾನಸಭಾ ವ್ಯಾಪ್ತಿಯಲ್ಲಿ ಸುಮಾರು 540 ಸರಕಾರಿ ಶಾಲೆಗಳಿವೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಮಾಧ್ಯಮಗಳಲ್ಲಿ ಮಕ್ಕಳು ಸಂಖ್ಯೆ ಕಡಿಮೆಯಾಗುತ್ತಿದೆ. ಅದರಲ್ಲೂ ಉತ್ತಮ ಕನ್ನಡ ಶಾಲೆಗಳಿಗೆ ಕರುನಾಡಶ್ರೀ ಪ್ರಶಸ್ತಿ ನೀಡಿದ ಬಳಿಕ 2023 ರಿಂದ 2024 ರಲ್ಲಿ ಶಾಲೆಗಳಲ್ಲಿ ಒಟ್ಟು ೨೦% ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.

ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಹಕ್ಕು ನಮ್ಮದು:
ಸರಕಾರಿ ಶಾಲೆ ಎಂದರೆ ತಾತ್ಸಾರದ ಭಾವನೆ ಹಲವರಲ್ಲಿದೆ. ಅಲ್ಲಿನ ಶಿಕ್ಷಣದ ಗುಣಮಟ್ಟ ಚೆನ್ನಾಗಿಲ್ಲ ಎಂಬ ವಾದ ಹೆಚ್ಚಿನ ಪೋಷಕರದ್ದು. ಆದರೆ, ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಹಕ್ಕು ನಮ್ಮದು. ಸರಕಾರಿ ಕನ್ನಡ ಶಾಲೆಗಳನ್ನು ಉಳಿಸಬೇಕು. ಇದಕ್ಕಾಗಿ ನಮ್ಮೆಲ್ಲರ ಪ್ರಯತ್ನ ಮುಖ್ಯವಾಗಿದೆ. ತಾಲೂಕು ಮಟ್ಟದಲ್ಲಿ ಶಾಲೆಗಳನ್ನು ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಶಾಲೆಗಳ ನಡುವೆ ಸಾಹಿತ್ಯಿಕ ಸ್ಪರ್ಧೆ ಹೆಚ್ಚಲು ಸಹಕಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಕ್ವಾರಿ ಹಾಗೂ ಕ್ರಷಸ್ ಅಸೋಸಿಯೇಶನ್‌ನ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ತಿಳಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!