ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ನಟ ಹಾಗೂ ಮಕ್ಕಳ್ ನೀಧಿ ಮೈಯಂ ಪಕ್ಷದ ನಾಯಕ ಕಮಲ್ ಹಾಸನ್ ರಾಜ್ಯಸಭಾ ಸಂಸದರಾಗಲಿದ್ದಾರೆ ಎಂಬ ವರದಿಗಳು ಕೆಲವು ದಿನಗಳಿಂದ ಹರಿದಾಡಿತ್ತು. ಇದರ ನಡುವೆ ಇಂದು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಕಮಲ್ ಹಾಸನ್ ಅವರನ್ನು ಭೇಟಿ ಮಾಡಿದ್ದಾರೆ.
ದ್ರಾವಿಡ ಪಕ್ಷಗಳ ವಿರುದ್ಧ ತಮ್ಮದೇ ಆದ ಪಕ್ಷವನ್ನು ಪ್ರಾರಂಭಿಸಿದ ಕಮಲ್ ಹಾಸನ್ ರಾಜಕೀಯ ಕ್ಷೇತ್ರದಲ್ಲಿ ಸರಣಿ ಸೋಲುಗಳನ್ನು ಎದುರಿಸಿದರು. ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಾದ್ಯಂತ ಡಿಎಂಕೆ ಮೈತ್ರಿಕೂಟದ ಪರ ಪ್ರಚಾರ ಮಾಡಿದರು.
ಇದೀಗ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಮಕ್ಕಳ್ ನೀಧಿ ಮೈಯಂ ಪಕ್ಷದ ನಾಯಕ ಕಮಲ್ ಹಾಸನ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ತಮಿಳುನಾಡಿನಲ್ಲಿ ಮುಂಬರುವ ರಾಜ್ಯಸಭಾ ಚುನಾವಣೆಯೊಂದಿಗೆ ಈ ಸಭೆ ಮಹತ್ವ ಪಡೆದುಕೊಂಡಿದೆ.
ತಮಿಳುನಾಡಿನ 6 ರಾಜ್ಯಸಭಾ ಸ್ಥಾನಗಳ ಅವಧಿ ಈ ವರ್ಷ ಕೊನೆಗೊಳ್ಳುತ್ತಿದೆ. ಆದ್ದರಿಂದ, ಲೋಕಸಭಾ ಚುನಾವಣೆಯ ಸಮಯದಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ, ಕಮಲ್ ಹಾಸನ್ಗೆ ರಾಜ್ಯಸಭಾ ಸಂಸದ ಸ್ಥಾನವನ್ನು ಡಿಎಂಕೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ಉದಯನಿಧಿ ಅವರು ಎಕ್ಸ್ನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ “ನಾವು ಇಂದು ಮಕ್ಕಳ್ ನೀಧಿ ಮೈಯಂ ನಾಯಕ ಕಮಲ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದೆವು. ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿದ ಅವರು ರಾಜಕೀಯ ಮತ್ತು ಕಲೆಯಂತಹ ವಿವಿಧ ಕ್ಷೇತ್ರಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಕಮಲ್ ಸರ್‌ಗೆ ನನ್ನ ಪ್ರೀತಿ ಮತ್ತು ಕೃತಜ್ಞತೆಗಳು” ಎಂದು ಅವರು ಪೋಸ್ಟ್ ಮಾಡಿದ್ದಾರೆ.