ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ಚಿತ್ರರಂಗದ ಹಿರಿಯ ನಟ, ದಿವಂಗತ ಘಟ್ಟಮನೇನಿ ಕೃಷ್ಣ ಅವರ ಪ್ರತಿಮೆಯನ್ನು ಆಂಧ್ರಪ್ರದೇಶದ ವಿಜಯವಾಡದಲ್ಲಿ ಸ್ಥಾಪಿಸಲಾಗಿದೆ.ಗುರುನಾನಕ್ ಕಾಲೋನಿಯಲ್ಲಿರುವ ಈ ಪ್ರತಿಮೆಯನ್ನು ಇಂದು ಭಾರತೀಯ ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಅನಾವರಣಗೊಳಿಸಿದರು.
ಇದೀಗ, ಕೃಷ್ಣ ಅವರಿಗೆ ನೀಡಿದ ಗೌರವಕ್ಕಾಗಿ ಕಮಲ್ ಹಾಸನ್ ಹಾಗೂ ದೇವಿನೇನಿ ಅವಿನಾಶ್ ಅವರಿಗೆ ನಟ ಮಹೇಶ್ ಬಾಬು ಆತ್ಮೀಯ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ದಿವಂಗತ ಘಟ್ಟಮನೇನಿ ಕೃಷ್ಣ ಅವರ ಪುತ್ರ ನಟ ಮಹೇಶ್ ಬಾಬು. ತಂದೆಯ ಪ್ರತಿಮೆಯನ್ನು ಅನಾವರಣಗೊಳಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಲು ನಟ ಇನ್ಸ್ಟಾಗ್ರಾಮ್ ವೇದಿಕೆಯನ್ನು ಬಳಸಿಕೊಂಡರು. “ವಿಜಯವಾಡದಲ್ಲಿ ಕೃಷ್ಣ ಅವರ ಪ್ರತಿಮೆಯ ಉದ್ಘಾಟನಾ ಕಾರ್ಯಕ್ರಮ ಅಲಂಕರಿಸಿದ ಕಮಲ್ ಹಾಸನ್ ಸರ್ ಮತ್ತು ದೇವಿನೇನಿ ಅವಿನಾಶ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ತಂದೆಯವರ ಪ್ರತಿಮೆಯನ್ನು ಅವರು ಅನಾವರಣಗೊಳಿಸಿರುವುದು ನಿಜಕ್ಕೂ ಗೌರವ. ಅವರು ಬಿಟ್ಟುಹೋದ ಪರಂಪರೆಗೆ ಇದು ಸಲ್ಲಿಸಿದ ಗೌರವ. ಅಲ್ಲದೇ, ಈ ಕಾರ್ಯಕ್ರಮವನ್ನು ಸಾಧ್ಯವಾಗಿಸಿದ ಎಲ್ಲಾ ಅಭಿಮಾನಿಗಳಿಗೆ ನನ್ನ ಹೃದಯದ ಅಂತರಾಳದಿಂದ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
ಕೃಷ್ಣ ಅವರ ಪ್ರತಿಮೆ ಅನಾವರಣದ ಸಮಯದಲ್ಲಿ ಯುವ ನಾಯಕ ದೇವಿನೇನಿ ಅವಿನಾಶ್ ಕೂಡ ಭಾಗಿ ಆಗಿದ್ದರು. ಅವರಿಗೂ ಮಹೇಶ್ ಬಾಬು ಧನ್ಯವಾದ ಅರ್ಪಿಸಿದ್ದಾರೆ. ‘ವಿಜಯವಾಡಲ್ಲಿ ಕೃಷ್ಣ ಅವರ ಪ್ರತಿಮೆಯನ್ನು ಅನಾವರಣ ಮಾಡಿದಕ್ಕೆ ಕಮಲ್ ಹಾಸನ್ ಸರ್ ಮತ್ತು ದೇವಿನೇನಿ ಅವಿನಾಶ್ ಅವರಿಗೆ ಧನ್ಯವಾದಗಳು. ಅವರು ನಮ್ಮ ತಂದೆಯ ಪ್ರತಿಮೆ ಅನಾವರಣ ಮಾಡಿದ್ದು ನಮಗೆ ಹೆಮ್ಮೆ ತಂದಿದೆ. ಇದನ್ನು ಸಾಧ್ಯವಾಗಿಸಿದ ಅಭಿಮಾನಿಗಳಿಗೆ ಧನ್ಯವಾದಗಳು’ ಎಂದು ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ.
ಅಂದಹಾಗೆ, ಈ ಸಮಾರಂಭಕ್ಕೆ ಸ್ವತಃ ಮಹೇಶ್ ಬಾಬು ಅವರು ಗೈರಾಗಿದ್ದರು. ‘ಗುಂಟೂರು ಖಾರಂ’ ಸಿನಿಮಾದ ಚಿತ್ರೀಕರಣದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅದರ ಶೂಟಿಂಗ್ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಆ ಕಾರಣದಿಂದ ಅವರು ತಂದೆಯ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹಾಜರಿ ಹಾಕಲು ಸಾಧ್ಯವಾಗಿಲ್ಲ. 350ಕ್ಕೂ ಅಧಿಕ ಸಿನಿಮಾಗಳಲ್ಲಿ ಕೃಷ್ಣ ಅವರು ನಟಿಸಿದ್ದರು. ನಿರ್ಮಾಪಕನಾಗಿ, ನಿರ್ದೇಶಕನಾಗಿಯೂ ಅವರು ಸಕ್ರಿಯರಾಗಿದ್ದರು.