ಇಪ್ಪತ್ತರ ಹುಡುಗ ನೇಣುಗಂಬದತ್ತ ನಡೆದಾಗ, ಕಲ್ಕತ್ತಾದ ಬೀದಿಗಳು ಜನರ ಕಣ್ಣೀರಿನಿಂದ ಒದ್ದೆಯಾಗಿದ್ದವು..

ಹೊಸದಿಗಂತ ಡಿಜಿಟಲ್ ಡೆಸ್ಕ್
ಸ್ವಾತಂತ್ರ್ಯ ಹೋರಾಟದ ದೃವತಾರೆ ಕನೈಲಾಲ್ ದತ್ತ (1888-1908) ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಂದನ್ನಗೋರ್‌ನಲ್ಲಿ ಜನಿಸಿದರು. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಡ್ಯುಪ್ಲೆಕ್ಸ್ ವಿದ್ಯಾಮಂದಿರದಲ್ಲಿ ಪಡೆದಿದ್ದರು. ಆ ಬಳಿಕ ತಮ್ಮ ಬಿಎ ಪದವಿಯನ್ನು ಹೂಗ್ಲಿಯ ಮುಹಮ್ಮದ್ ಮೊಹಸಿನ್ ಕಾಲೇಜಿನಲ್ಲಿ ಪಡೆದರು.
ಚಂದನ್ನಗೋರ್ ನಗರ ಫ್ರೆಂಚ್ ವಸಾಹತುವಾಗಿತ್ತು. ಸಮಯದಲ್ಲಿ ಅದು ಕ್ರಾಂತಿಕಾರಿಗಳಿಗೆ ಸುರಕ್ಷಿತ ಆಶ್ರಯ ಮತ್ತು  ಹೋರಾಟಗಾರರ ನೇಮಕಾತಿ ಕೇಂದ್ರವಾಗಿತ್ತು. ಕನೈಲಾಲ್ ಶಾಲಾ ವಿದ್ಯಾರ್ಥಿಯಾಗಿದ್ದಾಲೇ ಶಸ್ತ್ರಾಸ್ತ್ರ ಬಳಕೆ ತರಬೇತಿ ಪಡೆದಿದ್ದರು. ಅವರ ಬಿಎ ಪರೀಕ್ಷೆಯ ನಂತರ (ಏಪ್ರಿಲ್ 1908), ಅವರು ಪ್ರಬಾರ್ತಕ್ ಸಂಘದ ಮತಿಲಾಲ್ ರಾಯ್ ಅವರಿಂದ ರಿವಾಲ್ವರ್ ಅನ್ನು ಪಡೆದುಕೊಂಡರು ಮತ್ತು ಕಲ್ಕತ್ತಾಗೆ ಸ್ಥಳಾಂತರಗೊಂಡರು. ಪ್ರಾರಂಭ ದ ದಿನಗಳಲ್ಲಿ ಮುಜಾಫರ್‌ಪುರದಲ್ಲಿ ಸ್ವತಂತ್ರ್ಯ ಹೋರಾಟದ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಆ ಬಳಿಕ ಯುಗಾಂತರ್‌ನ ಗೋಪಿಮೋಹನ್ ದತ್ತ ರಚಿಸಿದ್ದ  ಅಡಗುತಾಣದಲ್ಲಿ ಬಾಂಬ್‌ಗಳನ್ನು ತಯಾರಿಸುವಲ್ಲಿ ನಿರತರಾಗಿದ್ದರು.
ಆದೇ ಸಂದರ್ಭದಲ್ಲಿ ನರೇನ್ ಗೊಸೈನ್ ಎಂಬ ದ್ರೋಹಿಯೊಬ್ಬ ಬ್ರಿಟೀಷರಿಗೆ ಸೆರೆಸಿಕ್ಕಿ ಬ್ರಿಟೀಷರು ಪುಸಲಾಯಿಸಿದಾಗ ಎಲ್ಲವನ್ನೂ ಬಾಯಿಬಿಟ್ಟಿದ್ದ. ಅರಬಿಂದೋ ಘೋಷ್ ಸೇರಿದಂತೆ ಇತರೆ ಕ್ರಾಂತಿಕಾರಿಗಳ ಪಾತ್ರದ ಕುರಿತು ಎಳೆ ಎಳೆಯಾಗಿ ಮಾಹಿತಿ ನೀಡಿದ್ದ. ಕ್ರಾಂತಿಕಾರಿಗಳಲ್ಲಿ ಪ್ರಾಣಕ್ಕಿಂತ ಕೊಟ್ಟ ಮಾತಿಗೆ ಬೆಲೆ ಜಾಸ್ತಿ. ದ್ರೋಹಿ ನರೇನ್ ಗೊಸೈನ್ ನ್ಯಾಯಾಲಯದಲ್ಲಿ ಹೇಳಿಕೆ ನೀಡುವ ಮುನ್ನ ಆತನನ್ನು ಪರಲೋಕಕ್ಕೆ ಕಳುಹಿಸಲು ಆಜ್ಞೆ ಹೊರಟಿತು. ಈ ಕಾರ್ಯಕ್ಕೆ 20 ವರ್ಷದ ಕನೈಲಾಲ್ ಮತ್ತು ಸತ್ಯೇಂದ್ರನಾಥ್ ಬೋಸ್ ರ ಆರಿಸಲಾಯಿತು. ದೇಶ ಪ್ರೇಮಿಗಳು ತಮ್ಮ ಕೆಲಸವನ್ನು ಅಚ್ಚುಗಟ್ಟಾಗಿ ನಿರ್ವಹಿಸಿದರು. ಮಾಣಿಕ್ತಾಲಾದಲ್ಲಿ ಬಾಂಬ್ ಸ್ಫೋಟಗೊಂಡಿತು. ದೇಶದ್ರೋಹಿಯ ದೇಹ ಗುರುತೇ ಸಿಗದಂತೆ ಛಿದ್ರವಾಯಿತು. ಬ್ರಿಟೀಷರಿಗೆ ಈ ಕೃತ್ಯದ ಹಿಂದೆ ಕನೈಲಾಲ್ ದತ್ತ ಪಾತ್ರ ಇರುವುದರ ಸುಳಿವು ಸಿಕ್ಕಿ, ಅತನನ್ನು 2 ಮೇ 1908 ರಂದು ಬಂಧಿಸಿದರು. ಆ ಬಳಿಕ ಅಲಿಪೋರ್ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.
ಈ ವೇಳೆ ಕನೈಲಾಲ್ ಮತ್ತು ಇನ್ನೊಬ್ಬ ಜೈಲು ಸಂಗಾತಿ ಸತ್ಯೇಂದ್ರನಾಥ್ ಬೋಸ್ ರಿಂದ ಪೊಲೀಸರು ಕ್ರಾಂತಿಕಾರಿಗಳ ರಹಸ್ಯವನ್ನು ತಿಳಿದುಕೊಳ್ಳಲು ಸಾಕಷ್ಟು ಪ್ರಯತ್ನಿಸಿದರಾದರೂ ಅವರಿಬ್ಬರೂ ಯಾವ ವಿಚಾರವನ್ನೂ ಬಾಯಿ ಬಿಡಲಿಲ್ಲ. ನಂತರದಲ್ಲಿ ವಿಚಾರಣೆ ವೇಳೆ ಬ್ರಿಟಿಷ್ ಮ್ಯಾಜಿಸ್ಟ್ರೇಟ್ʼ ಎಳೆ ಹುಡುಗ ಕನೈಲಾಲ್‌ನನ್ನು ಅವನ ಅಪರಾಧದ ಬಗ್ಗೆ ಕೇಳಿದಾಗ, ಆತ ಹೀಗೆಂದು ಉತ್ತರಿಸಿದ್ದ, ‘ಹೌದು ನಾನು ದೇಶದ್ರೋಹಿ ಕೊಂದಿದ್ದೇನೆ.’ ಮ್ಯಾಜಿಸ್ಟ್ರೇಟ್ ಏನೇ ಕೇಳಿದರೂ ಆ ಹುಡುಗ ಆ ಮಾತನ್ನೇ ಪುನರಾವರ್ತಿಸುತ್ತಿದ್ದ. ‘ನೀವು ಮೇಲ್ಮನವಿ ಸಲ್ಲಿಸಲು ಬಯಸುವಿರಾ?’ ಎಂಬ ಪ್ರಶ್ನೆಗೆ ಅವರಿಬ್ಬರೂ ನಿರಾಕರಿಸಿದ್ದರು. ‘ಇಲ್ಲ, ನಾವು ಯಾವುದೇ ಮೇಲ್ಮನವಿ ಸಲ್ಲಿಸುವುದಿಲ್ಲ. ಸಾಯಲು ಬಯಸುತ್ತೇವೆ ಎಂದಷ್ಟೇ ಉತ್ತರಿಸಿದ್ದರು.’
ಕೊನೆಗೆ  ಇಬ್ಬರಿಗೂ ಮರಣದಂಡನೆ ವಿಧಿಸಲಾಯಿತು. ಕನೈಲಾಲ್ ದತ್ತರ ವೀರತ್ವ, ಧೈರ್ಯ ಮತ್ತು ಮಾತೃಭೂಮಿಗಾಗಿ ಮಾಡಿದ ಅವಿರತ ತ್ಯಾಗ ಬೆಲೆಕಟ್ಟಲಾಗದ್ದು.
10 ನವೆಂಬರ್ 1908 ರಂದು, ಕನೈಲಾಲ್ ರನ್ನು ಜೈಲಿನೊಳಗೆ ಗಲ್ಲಿಗೇರಿಸಲಾಯಿತು. ಆದಿನ ಬೆಳಗ್ಗೆ ಕಲ್ಕತ್ತಾ ನಗರ ತನ್ನ ಇತಿಹಾಸದಲ್ಲೇ  ಸುದೀರ್ಘವಾದ ಮೆರವಣಿಗೆಗೆ ಸಾಕ್ಷಿಯಾಯಿತು, ಕನೈಲಾಲ್ ರ ಮೃತದೇಹವನ್ನು ಹೊತ್ತು ಜನರು ಮೆರವಣಿಗೆ  ಹೊರಟರು. ಆ ದಿನ ಕಲ್ಕತ್ತಾ ನಗರದ ಬೀದಿಗಳು ಲಕ್ಷಾಂತರ ಜನರ ಕಣ್ಣೀರಿನಿಂದ ಒದ್ದೆಯಾದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!