ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳಿರುವ ಮನೆಯಲ್ಲಿ ಎಷ್ಟೇ ಎಚ್ಚರವಾಗಿದ್ದರೂ ಕಡಿಮೆಯೇ. ಬೆಂಗಳೂರಿನಲ್ಲಿ ನೀರಿನ ಸಂಪ್‌ಗೆ ಬಿದ್ದು ಒಂದೂವರೆ ವರ್ಷದ ಕಂದಮ್ಮ ಮೃತಪಟ್ಟಿದೆ.
ಕೆಆರ್ ಪುರಂನ ಕನ್ಯಾನಗರದ ಬಸವಪ್ರಭು ವಾರ್ಡ್‌ನ ಸಾಯಿ ಸೆರಿನಿಟಿ ಲೇಔಟ್‌ನಲ್ಲಿ ದುರಂತ ಸಂಭವಿಸಿದೆ. ಒಂದೂವರೆ ವರ್ಷದ ಮಗು ಶಂಭು ಆಟವಾಡುವ ವೇಳೆ ನೀರಿಗೆ ಬಿದ್ದು ಮೃತಪಟ್ಟಿದೆ.
ನೇಪಾಳ ಮೂಲದ ಪ್ರಕಾಶ್ ಅವರ ಪುತ್ರ ಶಂಭು ಆಟ ಆಡುತ್ತಿದ್ದು, ಪ್ರಕಾಶ್ ಹಾಗೂ ಅವರ ಪತ್ನಿ ಕೂಲಿ ಕೆಲಸ ಮಾಡುತ್ತಿದ್ದರು. ಕಣ್ಣೆದುರೇ ಇದ್ದ ಮಗು ಕ್ಷಣಮಾತ್ರದಲ್ಲಿ ಆಟವಾಡುತ್ತಾ ಸಂಪಿಗೆ ಬಿದ್ದು ಪ್ರಾಣ ಕಳೆದುಕೊಂಡಿದೆ.
ಕಟ್ಟಡ ಜಯರಾಮ್ ನಾಯ್ಡು ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ಆವಲಹಳ್ಳಿ ಪೊಲೀಸರು ಸ್ಥಳ ಮೇಲ್ವಿಚಾರಕ ಸುಬ್ರಮಣಿ ಎಂಬುವವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಈಸ್ಟ್ ಪಾಯಿಂಟ್ ಆಸ್ಪತ್ರೆಯಲ್ಲಿ ರವಾನಿಸಿದ್ದಾರೆ. ಕಾರ್ಮಿಕರಿಗೆ ಯಾವುದೇ ವಸತಿಯನ್ನು ಕಲ್ಪಿಸಿರಲಿಲ್ಲ. ಕಟ್ಟಡದ ಆವರಣದಲ್ಲೇ ನೆಲೆಸಿದ್ದರು. ಲೇಔಟ್‌ನ ಖಾಲಿ ನಿವೇಶನಗಳನ್ನು ಶೌಚಾಲಯವಾಗಿ ಬಳಸುತ್ತಿದ್ದರು. ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.