ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಇದೇ ಆ.26ರಂದು ಬಿಡುಗಡೆಯಾಗಿ ವಿಶ್ವದೆಲ್ಲಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಂದರ್ಭದಲ್ಲಿ ಸಿನಿಮಾದ ಬಗ್ಗೆ ಎಲ್ಲಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ನಡುವೇ ನಟ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಬಳಿಕ ಈಗ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಕೂಡ ಯಶ್ ಹಾಗೂ ಚಿತ್ರತಂಡದ ಪರವಾಗಿ ಮಾತನಾಡಿದ್ದಾರೆ.
ರಿಷಬ್ ಹೇಳಿದ್ದೇನು?
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನಟ ರಿಷಬ್ ಶೆಟ್ಟಿ, ಇದೊಂದು ಧೈರ್ಯದ ಪ್ರಯತ್ನ ಎಂದು ಬರೆದುಕೊಂಡಿದ್ದಾರೆ.
ಒಬ್ಬ ಕಲಾವಿದನಾಗಿ ಪಾತ್ರಕ್ಕೆ ಜೀವ ತುಂಬುವ ಯಶ್ ಅವರ ಶ್ರದ್ದೆ ನನಗೆ ಇಷ್ಟವಾಗಿದೆ. ಒಬ್ಬ ಪ್ರಭಾವಿ ವ್ಯಕ್ತಿಯ ಹೋರಾಟವನ್ನು ಯಶ್ ಅದ್ಬುತವಾಗಿ ಪರದೆಯ ಮೇಲೆ ತಂದಿದ್ದಾರೆ. ಚಿತ್ರದ ಕಥೆ ಎಂದಿನ ಸಾಮಾನ್ಯ ಹಾದಿಯಲ್ಲಿ ಇಲ್ಲದೇ ಇರಬಹುದು, ಆದರೆ ಆ ಹಾದಿಯೇ ತಪ್ಪು ಎಂದು ಹೇಳಲು ಬರುವುದಿಲ್ಲ. ಒಂದು ಯೋಚನೆಯನ್ನು ಸಿನಿಮಾವನ್ನಾಗಿ ಮಾಡಲು ಹಾಕುವ ಶ್ರಮ ತುಂಬಾ ದೊಡ್ಡದು. ಯಶ್ ಅವರು ಚಿತ್ರದ ಪಾತ್ರಕ್ಕೆ ಸಂಪೂರ್ಣವಾಗಿ ಶರಣಾಗಿದ್ದಾರೆ. ಪ್ರತಿ ದೃಶ್ಯದಲ್ಲೂ ಅವರ ಪರಿಶ್ರಮ ಕಾಣುತ್ತಿದೆ ಎಂದಿದ್ದಾರೆ.
ಕನ್ನಡ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ಯಶ್ ಅವರಿಗೆ ‘ಹ್ಯಾಟ್ಸ್ ಆಫ್’. ಇದೇ ವೇಳೆ ಚಿತ್ರದ ನಿರ್ದೇಶಕಿ ಗೀತು ಮೋಹನ್ ದಾಸ್ ಮತ್ತು ನಿರ್ಮಾಪಕರಿಗೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ:
ಸಿನಿಮಾ ಕಲೆಕ್ಷನ್ ಎಷ್ಟು?
‘ಟಾಕ್ಸಿಕ್’ ಸಿನಿಮಾ ಇದೇ ಆ. 26ರಂದು ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಆರಂಭದಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿತಾದರೂ, ನಂತರದ ದಿನಗಳಲ್ಲಿ ಗಳಿಕೆಯಲ್ಲಿ ಕೊಂಚ ಕುಸಿತ ಕಂಡಿದೆ. ಆದರೂ ಸಿನಿಮಾ ಭಾರತದಲ್ಲಿ ಒಟ್ಟು 190.45 ಕೋಟಿ ರೂ. ಹಾಗೂ ವಿಶ್ವಾದ್ಯಂತ 254.75 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಚಿತ್ರದಲ್ಲಿ ಯಶ್ ಜತೆಗೆ ನಯನತಾರಾ, ಕಿಯಾರ ಅಡ್ವಾಣಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.



