ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿನೋದ್ ಪ್ರಭಾಕರ್ ಮತ್ತು ಸೋನಲ್ ಮೊಂತೆರೊ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ಕನ್ನಡ ಚಿತ್ರ ಮಾದೇವ ಜೂನ್ 6ರಂದು ಬಿಡುಗಡೆಯಾಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಮತ್ತು ಮೆಚ್ಚುಗೆ ಗಳಿಸುತ್ತಿರುವ ಈ ಚಿತ್ರ, ಒಂದೆಡೆ ಯಶಸ್ವಿಯಾಗಿ ಸಾಗುತ್ತಿರುವಾಗ ಮತ್ತೊಂದೆಡೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಶೋಗಳ ಕೊರತೆಯಿಂದಾಗಿ ಟೀಕೆಗಳಿಗೆ ಗ್ರಾಸವಾಗಿದೆ.
ಇತ್ತೀಚೆಗೆ ಮಾಧ್ಯಮದೊಂದಿಗೆ ಮಾತನಾಡಿದ ನಟ ವಿನೋದ್ ಪ್ರಭಾಕರ್, “ನಾವು ಭಿಕ್ಷೆ ಬೇಡುವ ಸ್ಥಿತಿಗೆ ಬಂದು ಬಿಟ್ಟಿದ್ದೇವೆ. ಕನ್ನಡ ಚಿತ್ರಗಳಿಗೆ ಮೊದಲಿಗೆ ಆದ್ಯತೆ ನೀಡಬೇಕು. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಎಲ್ಲವೂ ಸರಿಯಾಗಿದೆಯಾದರೂ, ಮಲ್ಟಿಪ್ಲೆಕ್ಸ್‌ಗಳಲ್ಲಿ ಹಿಂದಿ ಸಿನಿಮಾಗೆ ಕೊಡುವಷ್ಟು ಪ್ರಾಮುಖ್ಯತೆ ಕನ್ನಡಕ್ಕೆ ಕೊಡಲಾಗುತ್ತಿಲ್ಲ.” ಎಂದು ಬೇಸರ ವ್ಯಕ್ತಪಡಿಸಿದರು.
ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಈ ಕುರಿತು ಮಾತನಾಡಿ, ಮಲ್ಟಿಪ್ಲೆಕ್ಸ್ ಮಾಲೀಕರೊಂದಿಗೆ ಚರ್ಚೆ ನಡೆಸಿ ಹೆಚ್ಚಿನ ಶೋಗಳನ್ನು, ವಿಶೇಷವಾಗಿ ಸಂಜೆಯ ಪ್ರೈಮ್ ಟೈಂ ಶೋಗಳನ್ನು ನೀಡಲು ಭರವಸೆ ನೀಡಿದ್ದಾರೆ.
ನವೀನ್ ರೆಡ್ಡಿ ನಿರ್ದೇಶನದ ಮಾದೇವ ಚಿತ್ರದಲ್ಲಿ ವಿನೋದ್ ಪ್ರಭಾಕರ್ ತನ್ನ ಸಂಚಲನಕಾರಿ ವಿಭಿನ್ನ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ದೃಶ್ಯಗಳು, ದೊಡ್ಡ ತಾರಾಬಳಗದ ಪಾತ್ರಧಾರಿಗಳು ಹಾಗೂ ಪ್ರಖ್ಯಾತ ಸಂಗೀತ ನಿರ್ದೇಶಕ ಪ್ರದ್ಯೋತನ್ ಅವರ ಸಂಗೀತವು ಮತ್ತಷ್ಟು ಸೆಳೆಯುತ್ತಿವೆ. ಆದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಶೋಗಳ ಕೊರತೆ ಕಲಾವಿದರ ಉತ್ಸಾಹಕ್ಕೆ ಅಡ್ಡಿಪಡಿಸುತ್ತಿರುವುದು ವಿಷಾದಕರ.