ಕನ್ನಡ ಭಾಷೆಯನ್ನು ವಿಶ್ವ ಮಟ್ಟಕ್ಕೇರಿಸಬೇಕು: ಹಂಸಲೇಖ

ಹೊಸದಿಗಂತ ವರದಿ ಮೈಸೂರು:

ಕನ್ನಡ ನಾಡಿನಲ್ಲಿರುವ ಪ್ರತಿಯೊಬ್ಬ ತಾಯಿಯೂ ಕೂಡ ಕನ್ನಡ ಭಾಷೆ, ಸೀಮೆಪದ, ಜಾನಪದವನ್ನು ಕಲಿಸಬೇಕು. ಕನ್ನಡ ಭಾಷೆ ಎಲ್ಲರ ಮಂತ್ರವಾಗಬೇಕು. ಕನ್ನಡ ನಾಡು ಶಾಂತಿಯ ವನ, ಅಭಿವೃದ್ಧಿಯ ತೋಟವಾಗಬೇಕು. ಕನ್ನಡ ವಿಶ್ವದ ವೇದಿಕೆಯಲ್ಲಿ ಬೆಳೆಯಬೇಕು ಎಂದು ನಾದಬ್ರಹ್ಮ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ಭಾನುವಾರ ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕುವೆಂಪು ಕನ್ನಡವನ್ನು‌ ವಿಶ್ವಮಟ್ಟಕ್ಕೇರಿಸಿದ್ದಾರೆ. ಹಾಗಾಗಿ ದೆಹಲಿಯವರಿಗೆ ನಾವು ಬೇಕು, ನಮಗೆ ದೆಹಲಿಯವರು ಬೇಕು, ರಾಷ್ಟ್ರಧ್ವಜದೊಂದಿಗೆ ಕನ್ನಡ ಧ್ವಜವೂ ವಿಶ್ವಮಟ್ಟದಲ್ಲಿ ಹಾರಾಡಬೇಕು ಎಂದರು.

ಕನ್ನಡವನ್ನು ಪ್ರತಿಯೊಬ್ಬರೂ ಕಲಿಯಬೇಕು. ಇದು ಕನ್ನಡ ಸಮಾಜದಲ್ಲಿ ತಲೆ ಎತ್ತಿ ಬದುಕಲು ನೈತಿಕತೆಯಾಗಬೇಕು. ಕನ್ನಡ ನಾಡಿನಲ್ಲಿ ವಾಸಿಸುತ್ತಿರುವವರಲ್ಲಿ ಯಾರು ಕನ್ನಡ ಕಲಿತಿಲ್ಲ ಎಂಬುದರ ಬಗ್ಗೆ ಸಮೀಕ್ಷೆಯಾಗಿ ಇದರ ಡಾಟಾ ನಮ್ಮಲ್ಲಿರಬೇಕು. ಈ ಸಮೀಕ್ಷೆಯನ್ನು ನಡೆಸಲು 300ಜನರ ಕಾರ್ಪೋರೆಟ್ ತಂಡ ತಮ್ಮೊಂದಿಗೆ ಸಿದ್ದವಿದ್ದು, ಶೀಘ್ರದಲ್ಲೇ ಈ ಸಮೀಕ್ಷೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದರು.

30 ದಿನಗಳಲ್ಲಿ ಕನ್ನಡ ಭಾಷೆ ಕಲಿತವರಿಗೆ ಬಿಪಿಎಲ್ ಕಾರ್ಡ್ ಮಾದರಿ ಕನ್ನಡದ ಪಟ್ಟವನ್ನು ನೀಡಬೇಕು. ಆಸ್ಪತ್ರೆಯಲ್ಲಿ ಈ ಕನ್ನಡದ ಪಟ್ಟ ತೋರಿಸಿದರೆ ಉಚಿತ ಚಿಕಿತ್ಸೆ ಸಿಗುವಂತಾಗಬೇಕು. ಇರುವ ಒಂದು ಭೂಮಿ ನಾಶ ಮಾಡಲು ಕೇವಲ 7 ಅಣ್ವಸ್ತ್ರಗಳು ಸಾಕು, ಆದರೆ ಸಾವಿರಾರು ನ್ಯೂಕ್ಲಿಯರ್ ತಯಾರಿಸಿಟ್ಟಿದ್ದಾರೆ. ನಮಗೆ ಯುದ್ದ ಬೇಡಾ, ಶಾಂತಿ-ಅಭಿವೃದ್ಧಿ ಬೇಕು. ವಿಶ್ವದ ಮಕ್ಕಳು ಬದುಕನ್ನು ಪೂರ್ತಿಯಾಗಿ ಅನುಭವಿಸಬೇಕು. ಆ ಬದುಕನ್ನು ಯಾರೂ ಕಸಿದುಕೊಳ್ಳಬಾರದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!