ಹೊಸದಿಗಂತ ಡಿಜಿಟಲ್ ಡೆಸ್ಕ್
ಪ್ರವಾದಿ ಮಹಮದ್ ಕುರಿತಾದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಕಾನ್ಪುರದಲ್ಲಿ ನಡೆದ ಪ್ರತಿಭಟನೆ ವೇಳೆ ಘಟಿಸಿದ ಹಿಂಸಾಚಾರ ʼವ್ಯವಸ್ಥಿತ ಪಿತೂರಿʼ ಎಂದು ವಿಹೆಚ್‌ಪಿ ಆರೋಪಿಸಿದೆ.
ಕಾನ್ಪುರದಲ್ಲಿ ಮುಸ್ಲೀಮರು ಶುಕ್ರವಾರದ ಪ್ರಾರ್ಥನೆಯ ನಂತರ ನಡೆಸಿದ ಪ್ರತಿಭಟನೆ ವೇಲೆ ಹಿಂಸಾಚಾರ ಸ್ಫೋಟಗೊಂಡಿತ್ತು. ಪುಂಡರು ವ್ಯಾಪಕ ಕಲ್ಲುತೂರಾಟ, ಹಿಂಸಾತ್ಮಕ ಘರ್ಷಣೆ ನಡೆಸಿ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿ ಹಾಳುಗೆಡವಿದ್ದರು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ರಾಜ್ಯದ ವಿವಿಧ ಜಿಲ್ಲೆಗಳಿಂದ 300 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.
ಲಕ್ನೋದಲ್ಲಿ ನಡೆದ ಸಭೆಯಲ್ಲಿ ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ʼಇದೊಂದು ಯೋಜಿತ ಕೃತ್ಯವಾಗಿದ್ದು, ಮತಾಂಧರ ಇಂತಹ ಪಿತೂರಿಗಳಿಗೆ ಪೊಲೀಸರು ಮತ್ತು ಸಮಾಜವು ತಕ್ಕ ಪ್ರತ್ಯುತ್ತರ ನೀಡಲು ಸಮರ್ಥವಾಗಿದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಸಭೆಯಲ್ಲಿದ್ದ ನಾಯಕರು ಹಿಂಸಾಚಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು ಮತ್ತು ಇದನ್ನು ಯೋಜಿತ ಪಿತೂರಿ ಎಂದು ದೂರಿದ್ದಾರೆ ಎಂದು ಪರಾಂಡೆ ತಿಳಿಸಿದರು.
ಕೆಲ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಮತಾಂತರದ ಬಗ್ಗೆ ಸಭೆಯಲ್ಲಿ ಕಳವಳ ವ್ಯಕ್ತವಾಯಿತು. ಮತಾಂತರ ತಡೆಗೆ ಏಕರೂಪ ನಾಗರಿಕ ಸಂಹಿತೆಯನ್ನು ಶೀಘ್ರವೇ ಅನುಷ್ಠಾನಕ್ಕೆ ತರುವಂತೆ ವಿಎಚ್‌ಪಿ ಪ್ರಮುಖರು ಒತ್ತಾಯಿಸಿದ್ದಾರೆ. ವಾರಣಾಸಿಯ ಜ್ಞಾನವಾಪಿ ಮಸೀದಿಯ ವಿಷಯವೂ ಸಭೆಯಲ್ಲಿ ಚರ್ಚೆಯಾಯಿತು ಎಂದು ಪರಾಡೆ ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ