ಹೊಸದಿಗಂತ ಡಿಜಿಟಲ್ ಡೆಸ್ಕ್ :
ಇತ್ತೀಚೆಗೆ ಭಾರತೀಯ ಸಿನಿಮಾಗಳು ದೇಶ ವಿದೇಶ ಮಟ್ಟದಲ್ಲಿ ಖ್ಯಾತಿಗಳಿಸುತ್ತಿರುವುದು ಸಿನಿ ಕ್ಷೇತ್ರಕ್ಕೆ ಅಪಾರವಾದ ಮೆಚ್ಚುಗೆಯನ್ನು ತಂದೊಡ್ಡಿದೆ. ಈ ಪಟ್ಟಿಯಲ್ಲಿ ಕಾಂತಾರ ಸಿನಿಮಾದ ಪಾತ್ರವೂ ಪ್ರಮುಖವಾಗಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಮೆಚ್ಚುಗೆ ಗಳಿಸಿತ್ತು.
ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕಾಂತಾರ ನಿರ್ಮಾಪಕರು ಈ ಚಿತ್ರವನ್ನು ಇಟಾಲಿಯನ್ ಹಾಗೂ ಸ್ಪ್ಯಾನಿಶ್ ಭಾಷೆಯಲ್ಲಿ ಬಿಡುಗಡೆ ಮಾಡಲು ಸಿದ್ದತೆ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹೊಂಬಾಳೆ ಫಿಲ್ಮ್ಸ್, ಭಾರತೀಯರೂ ಸೇರಿದಂತೆ ಜಗತ್ತಿನ ಸಿನಿಪ್ರಿಯರ ಮನಗೆದ್ದಿರುವ ನಮ್ಮ ಕಾಣಿಕೆ ಕಾಂತಾರವನ್ನು ಶೀಘ್ರದಲ್ಲೇ ಇಟಾಲಿಯನ್ ಹಾಗೂ ಸ್ಪ್ಯಾನಿಶ್ ಭಾಷೆಯಲ್ಲಿ ಅಲ್ಲಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಮಾರ್ಚ್ 17 ರಂದು ‘ಕಾಂತಾರ’ ಸಿನಿಮಾ ವಿಶ್ವಸಂಸ್ಥೆಯ ಪ್ರತಿನಿಧಿಗಳಿಗಾಗಿ ಜಿನಿವಾದಲ್ಲಿ ಪ್ರದರ್ಶನಗೊಂಡಿತ್ತು. ಈ ಸಂದರ್ಭದಲ್ಲಿ ನಟ ನಿರ್ದೇಶಕ ರಿಷಬ್ ಶಟ್ಟಿ ಭಾಗವಹಿಸಿದ್ದರು.
ದೇಶದಾದ್ಯಂತ 2022ರ ಸೆ.30ರಂದು ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ರಿಷಬ್ ಶೆಟ್ಟಿ ಅವರು ‘ಕಾಂತಾರ 2’ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಮಳೆಗಾಲದಲ್ಲಿ ಈ ಚಿತ್ರದ ಶೂಟಿಂಗ್ ಆರಂಭ ಆಗುವ ಸಾಧ್ಯತೆ ಇದೆ.