August 21, 2026
Friday, August 21, 2026
spot_img

ಬುಡಕಟ್ಟು ಜನರ ಕಲ್ಯಾಣಕ್ಕಾಗಿ ದನಿ ಎತ್ತಿದ ಕಾರಜೋಳ: ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಗಮನ ಸೆಳೆದ ಸಂಸದ

ಹೊಸದಿಗಂತ ವರದಿ ಚಿತ್ರದುರ್ಗ:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಕುರಿತ ಸಂಸದೀಯ ಸಮಿತಿ ಸಭೆಯಲ್ಲಿ ಕರ್ನಾಟಕದ ಬುಡಕಟ್ಟು ಸಮುದಾಯಗಳ ಕಲ್ಯಾಣಕ್ಕೆ ಸಂಬಂಧಿಸಿದ ವಿವಿಧ ಪ್ರಮುಖ ಸಮಸ್ಯೆಗಳನ್ನು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಗೋವಿಂದ ಎಂ. ಕಾರಜೋಳ ಪ್ರಸ್ತಾಪಿಸಿ, ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ಗಮನ ಸೆಳೆದಿದ್ದಾರೆ.

ವಿಶೇಷವಾಗಿ ವನ್ ಧನ್ ವಿಕಾಸ್ ಕೇಂದ್ರಗಳು (VDVK), ಪಿಎಂ-ಜನ್-ಮನ್ (PM-JANMAN) ಯೋಜನೆ, ಬಾಕಿ ಅನುದಾನ ಬಿಡುಗಡೆ ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಅವರು ಸಭೆಯಲ್ಲಿ ಪ್ರಮುಖ ಪ್ರಶ್ನೆಗಳನ್ನು ಕೇಳಿದರು.

140 ವನ್ ಧನ್ ವಿಕಾಸ್ ಕೇಂದ್ರಗಳು ಮಂಜೂರು, ಕೇವಲ 69 ಮಾತ್ರ ಕಾರ್ಯನಿರ್ವಹಣೆ:

ಕರ್ನಾಟಕದಲ್ಲಿ 140 ವನ್ ಧನ್ ವಿಕಾಸ್ ಕೇಂದ್ರಗಳಿಗೆ (VDVK) ಮಂಜೂರಾತಿ ದೊರೆತಿದ್ದು, ಈ ಪೈಕಿ ಕೇವಲ 69 ಕೇಂದ್ರಗಳು ಮಾತ್ರ ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಉಳಿದ 71 ಕೇಂದ್ರಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ. ಉಳಿದ 71 ಕೇಂದ್ರಗಳು ಕಾರ್ಯಾರಂಭ ಮಾಡದಿರುವುದಕ್ಕೆ ಕಾರಣವೇನು ಹಾಗೂ ಅವುಗಳನ್ನು ಯಾವಾಗ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು ಎಂಬುದರ ಕುರಿತು ಸಚಿವಾಲಯದಿಂದ ಸ್ಪಷ್ಟ ಮಾಹಿತಿ ನೀಡುವಂತೆ ಅವರು ಒತ್ತಾಯಿಸಿದರು.

20.87 ಕೋಟಿ ರೂ.ಗಳಲ್ಲಿ 11.86 ಕೋಟಿ ರೂ. ಮಾತ್ರ ಬಿಡುಗಡೆ:

ಕರ್ನಾಟಕಕ್ಕೆ 20.87 ಕೋಟಿ ರೂಪಾಯಿ ಮಂಜೂರಾಗಿದ್ದರೂ, ಇದುವರೆಗೆ 11.86 ಕೋಟಿ ರೂಪಾಯಿ ಮಾತ್ರ ಬಿಡುಗಡೆಯಾಗಿದ್ದು, ಸುಮಾರು 9.01 ಕೋಟಿ ರೂಪಾಯಿ ಬಾಕಿ ಉಳಿದಿದೆ ಎಂದು ತಿಳಿಸಿದ ಅವರು, ಬಾಕಿ ಮೊತ್ತವನ್ನು ಬಿಡುಗಡೆ ಮಾಡದಿರುವುದಕ್ಕೆ ಕಾರಣವೇನು ಎಂಬುದನ್ನು ಸ್ಪಷ್ಟಪಡಿಸುವಂತೆ ಹಾಗೂ ಉಳಿದ 9.01 ಕೋಟಿ ರೂಪಾಯಿಯನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಅವರು ಸಚಿವಾಲಯವನ್ನು ಒತ್ತಾಯಿಸಿದರು.

PM-JANMAN ಯೋಜನೆಯಡಿ 12 VDVKಗಳು ಇನ್ನೂ ಕಾರ್ಯಾರಂಭವಾಗಿಲ್ಲ:

PM-JANMAN (ಪಿಎಂ-ಜನ್-ಮನ್) ಯೋಜನೆಯಡಿ ಕರ್ನಾಟಕಕ್ಕೆ 33 VDVK (ವನ್ ಧನ್ ವಿಕಾಸ್ ಕೇಂದ್ರ) ಗಳಿಗೆ ಮಂಜೂರಾತಿ ದೊರೆತಿದ್ದು, ಈ ಪೈಕಿ 21 ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದ 12 ಕೇಂದ್ರಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ. ಈ 12 ಕೇಂದ್ರಗಳು ಕಾರ್ಯಾರಂಭ ಮಾಡದಿರುವ ಕಾರಣಗಳನ್ನು ತಿಳಿಸುವಂತೆ ಹಾಗೂ ಅವುಗಳನ್ನು ಶೀಘ್ರವಾಗಿ ಕಾರ್ಯಾರಂಭಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾರಜೋಳ ಅವರು ಮನವಿ ಮಾಡಿದರು.

69 VDVKಗಳ ಜಿಲ್ಲಾವಾರು ಕಾರ್ಯಕ್ಷಮತಾ ವರದಿ ನೀಡುವಂತೆ ಮನವಿ:

ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ 69 VDVK (ವನ್ ಧನ್ ವಿಕಾಸ್ ಕೇಂದ್ರ) ಗಳ ಜಿಲ್ಲಾವಾರು ಕಾರ್ಯಕ್ಷಮತಾ ವರದಿಯನ್ನು ಸಚಿವಾಲಯದಿಂದ ಒದಗಿಸುವಂತೆ ಕಾರಜೋಳ ಅವರು ಮನವಿ ಮಾಡಿದರು. ಈ ವರದಿಯಲ್ಲಿ ಫಲಾನುಭವಿಗಳ ಸಂಖ್ಯೆ, ಮಂಜೂರಾದ, ಬಿಡುಗಡೆಯಾದ ಮತ್ತು ಬಳಕೆಯಾದ ಅನುದಾನದ ವಿವರ, ಕೇಂದ್ರಗಳ ಕಾರ್ಯನಿರ್ವಹಣೆಯ ಸ್ಥಿತಿ, ಉತ್ಪಾದಿಸಲಾಗುತ್ತಿರುವ ಉತ್ಪನ್ನಗಳ ವಿವರ, ಮಾರಾಟದ ವಿವರ ಹಾಗೂ ಬುಡಕಟ್ಟು ಸಮುದಾಯಗಳಿಗೆ ದೊರೆತ ಆದಾಯ ಸೇರಿದಂತೆ ಸಂಪೂರ್ಣ ಮಾಹಿತಿ ಒದಗಿಸುವಂತೆ ಅವರು ಕೋರಿದರು.

ಅರಣ್ಯ ಹಕ್ಕು ಕಾಯ್ದೆಯಡಿ ಕರ್ನಾಟಕದ 2.95 ಲಕ್ಷಕ್ಕೂ ಹೆಚ್ಚು ಅರ್ಜಿಗಳ ಕುರಿತು ಕಳವಳ:

ಅರಣ್ಯ ಹಕ್ಕು ಕಾಯ್ದೆಯಡಿ ಕರ್ನಾಟಕದಿಂದ 2,95,176 ಅರ್ಜಿಗಳು ಸ್ವೀಕರಿಸಲಾಗಿದ್ದು, ಅದರಲ್ಲಿ 2,62,626 ಅರ್ಜಿಗಳು ತಿರಸ್ಕೃತಗೊಂಡಿವೆ. ಕೇವಲ 16,700 ಅರ್ಜಿಗಳಿಗೆ ಮಾತ್ರ ಅನುಮೋದನೆ ನೀಡಿ ಹಕ್ಕುಪತ್ರ ವಿತರಿಸಲಾಗಿದ್ದು, ಇನ್ನು 15,850 ಅರ್ಜಿಗಳು ಬಾಕಿ ಉಳಿದಿವೆ ಎಂಬ ಅಂಕಿ-ಅಂಶಗಳ ಕುರಿತು ಕಾರಜೋಳ ಅವರು ಗಂಭೀರ ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ:

ಇಷ್ಟು ದೊಡ್ಡ ಸಂಖ್ಯೆಯ ಅರ್ಜಿಗಳು ತಿರಸ್ಕೃತಗೊಳ್ಳಲು ಮುಖ್ಯ ಕಾರಣಗಳೇನು? 15,850 ಅರ್ಜಿಗಳು ಇನ್ನೂ ಬಾಕಿ ಉಳಿದಿರುವುದೇಕೆ? ಬಾಕಿ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಸಚಿವಾಲಯ ಕೈಗೊಂಡಿರುವ ಕ್ರಮಗಳೇನು? ಎಂದು ಅವರು ಪ್ರಶ್ನಿಸಿದರು. ಅಲ್ಲದೇ ಕರ್ನಾಟಕದ ಜಿಲ್ಲಾವಾರು ಅಂಕಿ-ಅಂಶಗಳನ್ನು ಒದಗಿಸುವಂತೆ ಅವರು ಮನವಿ ಮಾಡಿದರು. ಜಿಲ್ಲಾವಾರು ಸ್ವೀಕರಿಸಿದ, ಅನುಮೋದಿಸಿದ, ತಿರಸ್ಕೃತಗೊಂಡ ಹಾಗೂ ಬಾಕಿ ಇರುವ ಅರ್ಜಿಗಳ ಸಂಖ್ಯೆ ಮತ್ತು ವಿತರಿಸಲಾದ ಹಕ್ಕುಪತ್ರಗಳ ಸಂಪೂರ್ಣ ವಿವರಗಳನ್ನು ನೀಡುವಂತೆ ಕೋರಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !