ಯೋಧರ ನಾಡಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ: ಹುತಾತ್ಮ ಯೋಧರಿಗೆ ಪುಷ್ಪಾರ್ಚನೆ ಮೂಲಕ ಗೌರವಾರ್ಪಣೆ

ಹೊಸದಿಗಂತ ವರದಿ ಮಡಿಕೇರಿ:
ಯೋಧರ ನಾಡಾದ ಕೊಡಗಿನಲ್ಲಿ ನಿವೃತ್ತ ಯೋಧರು, ವಿವಿಧ ಸಂಘಟನೆಗಳು, ದೇಶಾಭಿಮಾನಿಗಳು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸುವ ಮೂಲಕ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಿದರು.ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಯುವ ಘಟಕ ಹಿಂದು ಯುವ ವಾಹಿನಿ ನೇತೃತ್ವದಲ್ಲಿ ಮಡಿಕೇರಿಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು.

ನಗರದ ಮುಖ್ಯ ರಸ್ತೆಯಲ್ಲಿರುವ ಯುದ್ಧ ಸ್ಮಾರಕಕ್ಕೆ ನಿವೃತ್ತ ಯೋಧರು, ಹಿಂದು ಜಾಗರಣ ವೇದಿಕೆ, ಹಿಂದು ಯುವ ವಾಹಿನಿ ಕಾರ್ಯಕರ್ತರು ಹಾಗೂ ದೇಶಾಭಿಮಾನಿಗಳು ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸುವುದರೊಂದಿಗೆ ಸೈನಿಕರ ತ್ಯಾಗ, ಬಲಿದಾವನ್ನು ಸ್ಮರಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕೊಡಗು ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಮೇಜರ್ ಚಿಂಗಪ್ಪ ಅವರು, 1999ರಲ್ಲಿ ಭಾರತ ದೇಶದ ಗಡಿಗೆ ನುಸುಳಿ, ಬೆನ್ನ ಹಿಂದೆ ಚೂರಿ ಹಾಕಿದ ಪಾಕ್ ಸೇನೆಯನ್ನು ಮಟ್ಟ ಹಾಕುವಲ್ಲಿ ಭಾರತೀಯ ರಕ್ಷಣಾ ಪಡೆ ಯಶಸ್ವಿಯಾಗಿತ್ತು. ದೇಶದ ವಿರುದ್ಧ ಕುತಂತ್ರ ಮಾಡುವವರನ್ನು ಎದುರಿಸಲು ಭಾರತೀಯ ಸೈನಿಕರು ಸದಾ ಸಿದ್ಧರಾಗಿರುತ್ತಾರೆ. ಗಡಿಯಲ್ಲಿದ್ದು ನಮ್ಮ ಜೀವವನ್ನು ಉಳಿಸುವ ಕೆಲಸ ಯೋಧರು ಮಾಡುತ್ತಿದ್ದು, ಅವರನ್ನು ನಿತ್ಯ ಸ್ಮರಿಸಬೇಕು ಹಾಗೂ ಮುಂದಿನ ಪಿಳಿಗೆಗೆಗೂ ಇದರ ಬಗ್ಗೆ ಅರಿವು ಮೂಡಬೇಕು ಎಂದರು.

ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನಿವೃತ್ತ ಯೋಧರು, ದೇಶಾಭಿಮಾನಿಗಳು ಈ ಸಂದರ್ಭ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!