ರಾಜ್ಯಾದ್ಯಾಂತ ಸಾವರ್ಕರ್ ಜೀವನ ಕುರಿತ ‘ಕರಿನೀರ ವೀರ’ ನಾಟಕ ಪ್ರದರ್ಶನ: ಡಾ.ಯಶಸ್ವಿನಿ

ಹೊಸದಿಗಂತ ವರದಿ,ಮೈಸೂರು:

ಸಾವರ್ಕರ್ ಪ್ರತಿಷ್ಠಾನ ಮೈಸೂರು ವತಿಯಿಂದ ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಜೀವನಾಧಾರಿತ ಪ್ರಥಮ ಕನ್ನಡದ ನಾಟಕ “ಕರಿನೀರ ವೀರ” ರಾಜ್ಯಾದ್ಯಂತ ಪ್ರದರ್ಶನಗೊಳ್ಳಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಡಾ.ಯಶಸ್ವಿನಿ ತಿಳಿಸಿದರು.

ಶನಿವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಿನೀರ ವೀರ ನಾಟಕವನ್ನು ಮೈಸೂರಿನ ರಂಗಾಯಣ ಮಾಜಿ ನಿರ್ದೇಶಕ ಅಡ್ಡಂಡ ಸಿ ಕಾರಿಯಪ್ಪ ರಚಿಸಿ ನಿರ್ದೇಶಿಸಿದ್ದಾರೆ. ನಾಟಕವು ಈಗಾಗಲೇ ಬೆಂಗಳೂರು, ಮೈಸೂರು ಹಾಗೂ ಮಂಡ್ಯ ನಗರಗಳಲ್ಲಿ ಒಟ್ಟು 7 ಪ್ರದರ್ಶನ ಕಂಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ನಾಟಕವು ರಾಜ್ಯಾದ್ಯಂತ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ 100ಕ್ಕೂ ಹೆಚ್ಚು ಪ್ರದರ್ಶನ ಏರ್ಪಡಿಸುವ ಗುರಿಯನ್ನು ಸಾವರ್ಕರ್ ಪ್ರತಿಷ್ಠಾನ ಹೊಂದಿದೆ ಎಂದು ತಿಳಿಸಿದರು. ಆಯ್ದ ಗಣ್ಯರಿಗೆ ಮಾತ್ರ ನಾಟಕ ಪ್ರದರ್ಶನ ಮಾಡಲಾಗಿತ್ತು. ಇದೀಗ ಸಾರ್ವಜನಿಕರ ವೀಕ್ಷಣೆಗಾಗಿ ನವೆಂಬರ್ 7 ಹಾಗೂ 8 ರಂದು ಮೈಸೂರಿನ ಕಲಾಮಂದಿರದಲ್ಲಿ ಸಂಜೆ 6ಕ್ಕೆ ನಾಟಕ ಪ್ರದರ್ಶನವಿದೆ. ಅಂದು ಸಂಜೆ 5 ಗಂಟೆಗೆ ಕಲಾಮಂದಿರದ ಟಿಕೆಟ್ ಕೌಂಟರ್‌ನಲ್ಲಿ ನೂರು ರೂ ಶುಲ್ಕ ನೀಡಿ ಟಿಕೆಟ್ ಪಡೆಯಬಹುದಾಗಿದೆ.

ಅಯೋಧ್ಯಾ ಪ್ರಕಾಶನವು ನಾಟಕವನ್ನು ಪುಸ್ತಕ ರೂಪದಲ್ಲಿ ಹೊರತಂದಿದೆ, ಅದರ ಮಾರಾಟವೂ ಇರಲಿದೆ. ನಾಟಕದ ಪಾತ್ರ ಮತ್ತು ಸನ್ನಿವೇಶಗಳ ಆಧಾರಗಳು ಈ ಪುಸ್ತಕದಲ್ಲಿ ಉಲ್ಲೇಖವಾಗಿದೆ.

3 ಗಂಟೆಗಳ ಪ್ರದರ್ಶನದಲ್ಲಿ ಸುಮಾರು 20 ಮಂದಿ ಕಲಾವಿದರು ಪ್ರದರ್ಶನ ಮಾಡುತ್ತಿದ್ದಾರೆ. ಸಾವರ್ಕರ್ ರವರ ಜೈಲು ವಾಸದ ವೇಳೆ ಅನುಭವಿಸಿದ ದೈಹಿಕ ಹಾಗೂ ಮಾನಸಿಕ ಚಿತ್ರ ಹಿಂಸೆ, ಸ್ವಾತಂತ್ರ್ಯ ಭಾರತದಲ್ಲಿಯೂ ಅನುಭವಿಸಿದ ಕಷ್ಟ – ನಷ್ಟಗಳು, ಸಮಾನತೆಗಾಗಿ ನಡೆಸಿದ ಹೋರಾಟಗಳನ್ನು ಕಥಾನಕ ಒಳಗೊಂಡಿದೆ. ವಿರೋಧಿಗಳು ಮಾಡುವ ಟೀಕೆಗಳಿಗೆ ಉತ್ತರವಿದೆ ಎಂದು ತಿಳಿಸಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಸಾವರ್ಕರ್ ಕಷ್ಟದ ಹಾದಿ ಹಿಡಿದು ಅತಿ ಕಠಿಣ ಶಿಕ್ಷೆ ಅನುಭವಿಸಿದ ಮಹಾನ್ ವ್ಯಕ್ತಿ, ಅವರ ಸಹೋದರರು ಹಾಗೂ ಮಡದಿ, ಅತ್ತಿಗೆ ಸೇರಿ ಕುಟುಂಬವೇ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನ ಸವೆಸಿದವರು. ಅಂಥವರ ಬಗ್ಗೆ ರಾಜಕೀಯ ದುರುದ್ದೇಶದಿಂದ, ಪೂರ್ವಗ್ರಹ ಪೀಡಿತರಾಗಿ ಮಾತನಾಡುವ ಜನಗಳು ಸಾವರ್ಕರ್ ಏನು ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂಬ ಉದ್ದೇಶವನ್ನು ಪ್ರತಿಷ್ಠಾನ ಹೊಂದಿದೆ ಎಂದು ಹೇಳಿದರು. ಇದೇ ವೇಳೆ ನಾಟಕದ ಪೋಸ್ಟರ್‌ನ್ನು ಬಿಡುಗಡೆಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾವರ್ಕರ್ ಪ್ರತಿಷ್ಠಾನದ ಖಜಾಂಚಿ ಸಂದೇಶ್, ಸದಸ್ಯರಾದ ರಾಕೇಶ್ ಭಟ್, ಶಿವಕುಮಾರ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!