ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ಖಂಡಿಸಿ ಹಾಗೂ ನೀರು ಹರಿಸುವುದನ್ನು ತಡೆಯುವಂತೆ ಆಗ್ರಹಿಸಿ ಇಂದು ವಿವಿಧ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಲ್ಲ ನಗರಗಳಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಾರ್ವಜನಿಕರಿಗೆ ಸಾರಿಗೆ ಸಂಚಾರಕ್ಕೆ ಯಾವುದೇ ಸಮಸ್ಯೆಯಾಗದಂತೆ ಗಮನವಹಿಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವುದು, ವಾಹನ ಸಂಚಾರಕ್ಕೆ ಅಡ್ಡಿಪಡಿಸುವುದನ್ನು ನಿಷೇಧಿಸಲಾಗಿದೆ.
ಬೆಂಗಳೂರಿನಲ್ಲಿ ಬಸ್ ಸಂಚಾರ ಮಾಮೂಲಿ
ರಾಜಧಾನಿ ಬೆಂಗಳೂರಿನ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಗಳಿಗೆ ಬಂದ್ ಬಿಸಿ ತಟ್ಟಿಲ್ಲ. ಬೆಳಗ್ಗೆ ಆಫೀಸಿಗೆ ಹೋಗುವವರು, ಶಾಲೆಗೆ ಹೋಗುವವರು ಎಂದಿನಂತೆ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ.
ವಾಟಾಳ್ ನಾಗರಾಜ್ ಆಪ್ತ ಗಿರೀಶ್ ಪೊಲೀಸರ ವಶಕ್ಕೆ
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ, ವಾಟಾಳ್ ನಾಗರಾಜ್ ಅವರ ಆಪ್ತ ಹಾಗೂ ಕನ್ನಡ ಚಳವಳಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಖಾಲಿ ಕೊಡ ಹಿಡಿದು ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ರಾಮನಗರದಲ್ಲಿ ಪ್ರತಿಭಟನೆ ಜೋರಾಗಿದೆ.ರಾಮನಗರ ನಗರದ ಪ್ರಮುಖ ಜಂಕ್ಷನ್ ಆದ ಐಜೂರು ವೃತ್ತದಲ್ಲಿ ಕರುನಾಡು ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಕುಡಿಯುವ ನೀರಿಗೆ ಅಭಾವ ಎದುರಾಗುತ್ತಿರುವಾಗ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಕಾರ್ಯಕರ್ತರು ಕೈಯಲ್ಲಿ ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಶಾಲೆ ಕಾಲೇಜುಗಳು ಆರಂಭ
ಬಂದ್ ಹಿನ್ನೆಲೆ ಈ ಮೊದಲು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಆದರೆ ತದನಂತರ ಈ ಘೋಷಣೆಯನ್ನು ಹಿಂಪಡೆದಿದ್ದು, ಎಂದಿನಂತೆ ಶಾಲೆ ಕಾಲೇಜುಗಳು ಆರಂಭವಾಗಿವೆ. ಬೆಳಗ್ಗೆಯೇ ಶಾಲಾ ಕಾಲೇಜು ವಿದ್ಯಾರ್ಥಿಗಳು ಬಿಎಂಟಿಸಿ ಬಸ್ ಹಾಗೂ ಶಾಲಾ ಬಸ್‌ನಲ್ಲಿ ತೆರಳಿರುವುದು ಕಂಡುಬಂದಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ಅರ್ಜಿ ವಿಚಾರಣೆ ಇಲ್ಲ
ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು (ಆಗಸ್ಟ್ 13) ಸುಪ್ರೀಂ ಕೋರ್ಟ್‌ನಲ್ಲಿ ನಡೆಯುವುದಿಲ್ಲ. ಪ್ರಕರಣದ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ (ಆಗಸ್ಟ್ 17) ಮುಂದೂಡುವ ಸಾಧ್ಯತೆಯಿದೆ.
ತಮಿಳುನಾಡಿನ ಪ್ರಮುಖ ನಗರಗಳಿಗಿಲ್ಲ ಬಸ್
ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರ ಸೂಚನೆ ಮೇರೆಗೆ ನಗರದಿಂದ ತಮಿಳುನಾಡಿಗೆ ಸಂಚರಿಸುವ ಬಸ್ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಸ್ಯಾಟ್ಲೈಟ್ ಬಸ್ ನಿಲ್ದಾಣದಿಂದ ತಮಿಳುನಾಡಿನ ಪ್ರಮುಖ ನಗರಗಳಾದ ಊಟಿ, ತಿರುವಣ್ಣಾಮಲೈ, ತಲ್ಲಕುರ್ಚಿ, ಸೇಲಂ, ವೇಲೂರು, ಕಲ್ಪಕಂ, ಕಾಂಜಿವರಂ, ವಂದಾವಾಸಿ, ತಿರುವಳ್ಳೂರು, ಉಳುಂದೂರು ಪೇಟೆ, ತಿರುಪ್ಪತ್ತೂರು, ಕಡಲೂರು, ತಿರುತ್ತಣಿ, ತಿಟ್ಟಕುಡಿ, ತಿರುಕ್ಕೋವಿಲೂರು, ಚಿದಂಬರಂ, ವಿರುತ್ತಾಚಲಂ ಸೇರಿ ಹಲವು ಊರುಗಳಿಗೆ ತೆರಳಬೇಕಿದ್ದ ಬಸ್‌ಗಳು ಸದ್ಯ ಬೆಂಗಳೂರಿನಲ್ಲಿಯೇ ಉಳಿದಿವೆ.



