ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಅರ್ನಬ್’ ಚಂಡಮಾರುತದಿಂದ ತೀವ್ರ ಹಾನಿಗೊಳಗಾಗಿರುವ ಆಂಧ್ರಪ್ರದೇಶದಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಪುನಃಸ್ಥಾಪಿಸಲು ಕರ್ನಾಟಕ ಸರ್ಕಾರ ನೆರವಿನ ಹಸ್ತ ಚಾಚಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ, 500 ಕೌಶಲ್ಯಯುತ ಲೈನ್ಮನ್ಗಳು ಸೇರಿದಂತೆ ಅಗತ್ಯ ಮಾನವಶಕ್ತಿ ಮತ್ತು ಆಧುನಿಕ ಉಪಕರಣಗಳನ್ನು ಆಂಧ್ರಕ್ಕೆ ರವಾನಿಸಿದೆ.
ಚಂದ್ರಬಾಬು ನಾಯ್ಡುಗೆ ಸಿಎಂ ಭರವಸೆ
ವಿದ್ಯುತ್ ಮೂಲಸೌಕರ್ಯ ಮರುಸ್ಥಾಪನೆಗೆ ಮಾನವಶಕ್ತಿ ಮತ್ತು ಉಪಕರಣಗಳನ್ನು ಒದಗಿಸುವಂತೆ ಆಂಧ್ರಪ್ರದೇಶ ಸರ್ಕಾರ ಕರ್ನಾಟಕಕ್ಕೆ ಮನವಿ ಮಾಡಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿರುವ ರಾಜ್ಯ ಸರ್ಕಾರ, ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಮೇಲ್ವಿಚಾರಣೆಯಲ್ಲಿ ನೆರವು ನೀಡಲು ಮುಂದಾಗಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕದ ಸಂಪೂರ್ಣ ಬೆಂಬಲವಿದೆ ಎಂದು ಭರವಸೆ ನೀಡಿದ್ದಾರೆ. ವಿದ್ಯುತ್ ಅತ್ಯಗತ್ಯ ಸೇವೆಯಾಗಿದ್ದು, ಜನರ ಸುರಕ್ಷತೆ ಮತ್ತು ದೈನಂದಿನ ಬದುಕಿನ ದೃಷ್ಟಿಯಿಂದ ಪೂರೈಕೆಯನ್ನು ಶೀಘ್ರವಾಗಿ ಮರುಸ್ಥಾಪಿಸುವುದು ಅಗತ್ಯ ಎಂದು ತಿಳಿಸಿದ್ದಾರೆ.
500 ಲೈನ್ಮನ್ಗಳು, 40ಕ್ಕೂ ಹೆಚ್ಚು ಯಂತ್ರಗಳು
ವಿದ್ಯುತ್ ವಿತರಣಾ ವ್ಯವಸ್ಥೆಯ ದುರಸ್ತಿ ಕಾರ್ಯಕ್ಕಾಗಿ 500 ತರಬೇತಿ ಪಡೆದ ಲೈನ್ಮನ್ಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಕ್ರೇನ್ ಮತ್ತು ಅರ್ಥ್ ಆಗರ್ಗಳನ್ನು ಹೊಂದಿರುವ 15 ಪಾಲ್ಫಿಂಗರ್ ಲಾರಿಗಳು ಹಾಗೂ 25 ಟ್ರ್ಯಾಕ್ಟರ್ ಆಧಾರಿತ ಡ್ರಿಲ್ಲಿಂಗ್ ಯಂತ್ರಗಳನ್ನು ಕಳುಹಿಸಲಾಗಿದೆ.
ಸಿಬ್ಬಂದಿಯನ್ನು ತಲಾ 10 ಸದಸ್ಯರ ತಂಡಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ತಂಡಕ್ಕೆ ಎಂಜಿನಿಯರ್ಗಳು ನೇತೃತ್ವ ವಹಿಸಲಿದ್ದಾರೆ. ಕಾರ್ಯನಿರ್ವಾಹಕ ಎಂಜಿನಿಯರ್ಗಳು ಒಟ್ಟಾರೆ ಮೇಲ್ವಿಚಾರಣೆ ನಡೆಸಲಿದ್ದು, ಪ್ರತಿ ವಿದ್ಯುತ್ ಸರಬರಾಜು ಕಂಪನಿಯಿಂದ ಸಂಪರ್ಕ ಅಧಿಕಾರಿಗಳನ್ನು ನೇಮಿಸಲಾಗಿದೆ.
ತುರ್ತು ನೆರವಿಗೆ ವ್ಯವಸ್ಥೆ
ಉಪಕರಣಗಳ ಚಾಲಕರು ಮತ್ತು ಆಪರೇಟರ್ಗಳನ್ನೂ ತಂಡಗಳೊಂದಿಗೆ ಕಳುಹಿಸಲಾಗಿದ್ದು, ಸಿಬ್ಬಂದಿಯ ಪ್ರಯಾಣ, ವಸತಿ ಹಾಗೂ ಇತರ ಅಗತ್ಯಗಳಿಗೆ ತುರ್ತು ನಿಧಿ ವ್ಯವಸ್ಥೆ ಮಾಡಲಾಗಿದೆ.



