ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕೇಂದ್ರ ಸರ್ಕಾರ ‘Z’ ಕೆಟಗರಿ ಭದ್ರತೆ ಒದಗಿಸಿದೆ.
ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಲಿಖಿತ ಆದೇಶ ಹೊರಡಿಸಿದೆ. ಗುಪ್ತಚರ ಇಲಾಖೆಯ ಇತ್ತೀಚಿನ ಬೆದರಿಕೆ ವರದಿಯ ನಂತರ ಸರ್ಕಾರ ಈ ಆದೇಶ ಹೊರಡಿಸಿದ್ದು, ಸಿಆರ್ ಪಿಎಫ್ ಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
CRPF ಸಿಬ್ಬಂದಿ ಭೌತಿಕವಾಗಿ ರಾಜ್ಯಪಾಲರ ಭದ್ರತೆ ವಹಿಸಿಕೊಂಡಿದ್ದು, ಇತರ ಕೆಲವು ಕಾರ್ಯವಿಧಾನಗಳು ಈ ವಾರದೊಳಗೆ ಪೂರ್ಣಗೊಳ್ಳಲಿವೆ. ಕರ್ನಾಟಕದಲ್ಲಿ ಮಾತ್ರ ಗೆಹ್ಲೋಟ್ ಅವರಿಗೆ Z ಕೆಟಗರಿ ಭದ್ರತೆಯನ್ನು ಒದಗಿಸಲಾಗುವುದು ಎಂದು ಮೂಲಗಳು ಹೇಳಿವೆ.
ಜುಲೈ 2021 ರಲ್ಲಿ ಕರ್ನಾಟಕದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ಥಾವರ್ ಚಂದ್ ಗೆಹ್ಲೋಟ್ಅವರು ಕರ್ನಾಟಕದ 13 ನೇ ರಾಜ್ಯಪಾಲರಾಗಿದ್ದಾರೆ.
ಗೆಹ್ಲೋಟ್ ಅವರು 2014 ರಿಂದ 2021 ರವರೆಗೆ ಕೇಂದ್ರ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಸ್ಥಾನವನ್ನು ಹೊಂದಿದ್ದರು. ಅಲ್ಲದೇ ಅವರು, ರಾಜ್ಯಸಭೆಯಲ್ಲಿ ಸಭಾನಾಯಕರಾಗಿಯೂ ಸೇವೆ ಸಲ್ಲಿಸಿದ್ದು, ಬಿಜೆಪಿ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿದ್ದರು.