ಬಿಎಂಟಿಸಿಗೆ 840 ಹೊಸ ಬಸ್‌ ಖರೀದಿ ಪ್ರಸ್ತಾವಕ್ಕೆ ಕರ್ನಾಟಕ ಹೈಕೋರ್ಟ್ ಗ್ರೀನ್‌ ಸಿಗ್ನಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ 840 ಹೊಸ ಬಸ್‌ ಖರೀದಿ ಪ್ರಸ್ತಾವಕ್ಕೆ ಕೊನೆಗೂ ಕರ್ನಾಟಕ ಹೈಕೋರ್ಟ್ ಒಪ್ಪಿಗೆ ನೀಡಿದೆ.

ಕರ್ನಾಟಕ ಹೈಕೋರ್ಟ್ ಸೋಮವಾರ ಹೊಸದಾಗಿ 840 ಬಸ್‌ಗಳನ್ನು ಖರೀದಿ ಸಂಬಂಧ ಕಾರ್ಯಾದೇಶ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಬೆಂಗಳೂರು ಮಹಾನಗರದ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಅನುಮತಿ ನೀಡಿದೆ.

ಬೆಂಗಳೂರು ವಿಕಲಚೇತನ ಸುನೀಲ್ ಕುಮಾರ್ ಜೈನ್ ಹೊಸ ಬಸ್‌ಗಳ ಖರೀದಿ ಟೆಂಡರ್ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಲೆ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಎಂಟಿಸಿ ಪರ ವಕೀಲರು, ‘ಕಾರ್ಯಾಚರಣೆಯಲ್ಲಿರುವ ಬಿಎಂಟಿಸಿ ಬಸ್‌ಗಳ ಪೈಕಿ ಶೇ 21ರಷ್ಟು ಬಸ್‌ಗಳಲ್ಲಿ ಗಾಲಿಕುರ್ಚಿ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ಬಸ್‌ನಲ್ಲಿ ಅಂಗವಿಕಲರಿಗೆ ನಾಲ್ಕು (ಮಹಿಳೆ/ಪುರುಷರಿಗೆ ತಲಾ ಎರಡು) ಸೀಟುಗಳನ್ನು ಮೀಸಲಿರಿಸಲಾಗಿದೆ’ ಎಂದು ತಿಳಿಸಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಅಂಗವಿಕಲರ ಪ್ರಯಾಣಕ್ಕೆ ಅನುಕೂಲಕರ ಸೌಲಭ್ಯ ಕಲ್ಪಿಸಲು ಬಿಎಂಟಿಸಿ ಕ್ರಮ ಅನುಸರಿಸುತ್ತಿದೆ’ ಎಂದಿತು.

‘ಅರ್ಜಿದಾರರು ಬಯಸಿದಂತೆ ಒಂದೇ ಬಾರಿಗೆ ಎಲ್ಲಾ ಕ್ರಮಕೈಗೊಳ್ಳಬೇಕೆಂದು ನಿರೀಕ್ಷಿಸುವುದು ಅಸಾಧ್ಯ. ಹಂತ ಹಂತವಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಬಿಎಂಟಿಸಿಗೆ ಒಂದಷ್ಟು ಕಾಲಾವಕಾಶ ನೀಡಬೇಕು’ ಎಂದು ಸೂಚಿಸಿ ಹೊಸ ಬಸ್‌ಗಳ ಖರೀದಿಗೆ ಕಾರ್ಯಾದೇಶ ಹೊರಡಿಸಲು ಅನುಮತಿ ನೀಡಿ ಆದೇಶಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!